ಪೊನ್ನಂಪೇಟೆ, ಜೂ. ೧೯: ಹಣದ ಆಸೆಗಾಗಿ ವನ್ಯಜೀವಿಯಾದ ಬಿಳಿ ಬಣ್ಣದ ಒಂದು ಜೀವಂತ ಗೂಬೆಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ವೀರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ವಶಕ್ಕೆ ಪಡೆದು, ಗೂಬೆಯನ್ನು ರಕ್ಷಣೆ ಮಾಡಿದ್ದಾರೆ.

ಮಾರುತಿ ವ್ಯಾಗನರ್ (ಕೆ.ಎಲ್.೧೪ ಎ.ಬಿ. ೧೭೩೧) ವಾಹನದಲ್ಲಿ ಗೂಬೆಯನ್ನು ಅಧಿಕ ಬೆಲೆಗೆ ಮಾರಾಟ ಮಾಡಲು ಬರುತ್ತಿರುವುದಾಗಿ ಸಿಕ್ಕಿದ ಖಚಿತ ಮಾಹಿತಿಯ ಮೇರೆಗೆ ವೀರಾಜಪೇಟೆ ಸಿ.ಐ.ಡಿ. ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ವೀರಾಜಪೇಟೆಯ ಚಿಕ್ಕಪೇಟೆಯಲ್ಲಿ ದಾಳಿ ನಡೆಸಿ ಬಿಳಿ ಗೂಬೆಯನ್ನು ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಬಾಯಾರ್‌ನ ಮಹಮದ್ ನಡುಬೈಲ್, ಅಬ್ದುಲ್ ಸತ್ತಾರ್ ನಡುಬೈಲ್, ದಕ್ಷಿಣ ಕನ್ನಡ ಜಿಲ್ಲೆಯ ದೇರಳಕಟ್ಟೆಯ ಬಿ. ಶೇಕಬ್ಬ ಎಂಬವರನ್ನು ಬಂಧಿಸಿ ವನ್ಯಜೀವಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪೊಲೀಸ್ ಮಹಾ ನಿರೀಕ್ಷಕ ಕೆ.ವಿ. ಶರತ್ ಚಂದ್ರ ಅವರ ನಿರ್ದೇಶನದ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಆರಕ್ಷಕ ಉಪ ನಿರೀಕ್ಷಕರಾದ ವೀಣಾನಾಯಕ್, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಕೆ.ಎಸ್. ದೇವಯ್ಯ, ಸಿ.ಬಿ. ಬೀನಾ, ಎಸ್.ಎಂ. ಯೋಗೇಶ್, ಪಿ.ಯು ಮುನೀರ್, ಆರ್. ನಂದ ಕುಮಾರ್ ಭಾಗವಹಿಸಿದ್ದರು. -ಚನ್ನನಾಯಕ