‘ಅಗ್ನಿಪಥ’ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ
ನವದೆಹಲಿ, ಜೂ. ೧೯: ಕೇಂದ್ರ ರಕ್ಷಣಾ ಸಚಿವಾಲಯ ತಂದಿರುವ ಭಾರತೀಯ ಮಿಲಿಟರಿಗೆ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ. ದೇಶದ ಯುವಶಕ್ತಿಯನ್ನು ಹೆಚ್ಚಿಸಲು ಇರುವ ಏಕೈಕ ಪ್ರಗತಿಪರ ಹೆಜ್ಜೆ ಎಂದು ದೇಶಾದ್ಯಂತ ಯೋಜನೆಗೆ ಪ್ರತಿಭಟನೆ ತೀವ್ರವಾಗಿರುವ ಸಂದರ್ಭದಲ್ಲಿ ಸೇನೆಯ ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಭಾರತೀಯ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಹಿರಿಯ ಅಧಿಕಾರಿಗಳು ಇಂದು ದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಕೇಂದ್ರ ಸರ್ಕಾರ ಕಳೆದ ಜೂನ್ ೧೪ರಂದು ಮಿಲಿಟರಿಯಲ್ಲಿ ಯುವಕರನ್ನು ನೇಮಕಾತಿ ಮಾಡುವ ಅಗ್ನಿಪಥ್ ಯೋಜನೆಯನ್ನು ಜಾರಿಗೆ ತಂದಿದ್ದು, ವಾಯುಸೇನೆಗೆ ಜೂನ್ ೨೪ ರಂದು ನೇಮಕಾತಿ ಆರಂಭವಾಗಲಿದೆ. ಈ ಮಧ್ಯೆ ಅಗ್ನಿಪಥ ಯೋಜನೆ ಮಿಲಿಟರಿಗೆ ಸೇರುವ ಯುವಕರಿಗೆ ಮಾರಕವಾಗಿದೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ ಎಂದು ಬಿಹಾರ, ಪಶ್ಚಿಮ ಬಂಗಾಳ, ಹೈದರಾಬಾದ್, ಸಿಕಂದರಾಬಾದ್, ತೆಲಂಗಾಣ, ಪಂಜಾಬ್, ಕೇರಳ ರಾಜ್ಯಗಳಲ್ಲಿ ತೀವ್ರವಾಗಿ ಸಾವು ನೋವುಗಳು ಸಂಭವಿಸಿವೆ. ರೈಲು, ಬಸ್ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗಳು ಪ್ರತಿಭಟನೆ, ಹಿಂಸಾಚಾರದಲ್ಲಿ ಹಾನಿಗೀಡಾಗಿವೆ. ಈ ಎಲ್ಲದರ ಮಧ್ಯೆ ಇಂದು ದೆಹಲಿಯಲ್ಲಿ ಭಾರತೀಯ ನೌಕಾಪಡೆ ಮತ್ತು ವಾಯುಪಡೆಯ ಅಧಿಕಾರಿಗಳೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ, ಅಗ್ನಿಪಥ್ ಯೋಜನೆಯನ್ನು ಏಕೆ ಹಿಂತೆಗೆದುಕೊಳ್ಳಬೇಕು. ದೇಶವನ್ನು ಯುವಶಕ್ತಿಯನ್ನಾಗಿಸಲು ಅದೊಂದೇ ಪ್ರಗತಿಪರ ಹೆಜ್ಜೆಯಾಗಿದೆ. ದೇಶದ ಭದ್ರತೆ ದೃಷ್ಟಿಯಿಂದ ಈ ಯೋಜನೆ ಮುಖ್ಯವಾಗಿದೆ. ನಮ್ಮ ದೇಶದ ಅತಿ ಎತ್ತರದ ಪ್ರದೇಶಗಳಲ್ಲಿ ನೇಮಕಗೊಂಡಿರುವ ಮಿಲಿಟರಿ ಸಿಬ್ಬಂದಿಗಳು ಅನಾರೋಗ್ಯ ಕಾರಣದಿಂದ ಎಷ್ಟು ಮಂದಿ ಸಾಯುತ್ತಾರೆ ಎಂದು ನಿಮಗೆ ಗೊತ್ತಿದೆಯೇ, ಅದರ ಬಗ್ಗೆ ತಿಳಿದುಕೊಳ್ಳಿ ಆಗ ನಿಮಗೆ ಮಿಲಿಟರಿಯಲ್ಲಿ ಯುವಕರ ಅಗತ್ಯ ಎಷ್ಟಿರುತ್ತದೆ ಎಂಬುದು ಗೊತ್ತಾಗುತ್ತದೆ ಎಂದರು. ಭಾರತೀಯ ಸೇನೆಯ ಅಡಿಪಾಯ ಶಿಸ್ತು. ಬೆಂಕಿ ಹಚ್ಚುವುದು, ವಿಧ್ವಂಸಕ ಕೃತ್ಯಗಳಿಗೆ ಇಲ್ಲಿ ಜಾಗವಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ಪ್ರತಿಭಟನೆ ಅಥವಾ ವಿಧ್ವಂಸಕ ಕೃತ್ಯದ ಭಾಗವಾಗಿಲ್ಲ ಎಂದು ಪ್ರಮಾಣಪತ್ರವನ್ನು ತೋರಿಸ ಬೇಕಾಗುತ್ತದೆ. ಪೊಲೀಸ್ ಪ್ರಮಾಣಪತ್ರ ನೂರಕ್ಕೆ ನೂರು ಸರಿಯಾಗಿರುತ್ತದೆ. ಪ್ರಮಾಣಪತ್ರ ಇಲ್ಲದಿದ್ದರೆ ಸೇನೆ ಸೇರಲು ಸಾಧ್ಯವಿಲ್ಲ ಎಂದು ತಿಳಿಸಿದರು.
‘ಅಗ್ನಿಪಥ’ ವಿರುದ್ಧ ಪ್ರತಿಭಟನೆ ರಾಜಕೀಯ ಪ್ರೇರಿತ
ಬೆಂಗಳೂರು, ಜೂ. ೧೯: ಕಾಂಗ್ರೆಸ್ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಇಡೀ ದೇಶದಲ್ಲಿ ಮಾಡುತ್ತಿದೆ. ಅದಕ್ಕೆ ಖಾನಾಪುರ ಶಾಸಕರು ಧರಣಿ ಮಾಡುತ್ತಿರುವುದು ಸಾಕ್ಷಿಯಾಗಿದೆ. ಇಡೀ ಜಗತ್ತಿನಲ್ಲಿ ಅಗ್ನಿಪಥ ಎನ್ನುವುದು ವಿನೂತನ ಯೋಜನೆಯಾಗಿದ್ದು ಯುವಕರಿಗೆ ಮಿಲಿಟರಿ ತರಬೇತಿ ನೀಡುವ ವ್ಯವಸ್ಥೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿAದು ಮಾತನಾಡಿದ ಅವರು, ಯುವಕರು ೧೭ ರಿಂದ ೨೧ ವರ್ಷದೊಳಗಿನವರು ಶಿಸ್ತಿನ ಉತ್ತಮವಾದ ಮಿಲಿಟರಿ ತರಬೇತಿಯನ್ನು ಪಡೆದರೆ ಬೇರೆ ಬೇರೆ ಅವಕಾಶ ಸಿಗುತ್ತದೆ. ಸಶಕ್ತವಾಗಿರುವ ಯುವಕರ ಜನಸಂಖ್ಯೆಯನ್ನು ಸಿದ್ಧತೆ ಮಾಡುವ ದೃಷ್ಟಿಯಿಂದ ಸೇನಾಪಡೆಯಲ್ಲಿ ಯುವಶಕ್ತಿಯನ್ನು ತರುವಂತಹ ಮಹಾತ್ವಾಕಾಂಕ್ಷಿ ಯೋಜನೆ ಎಂದರು. ಈಗಾಗಲೇ ಪರೀಕ್ಷೆ ಬರೆದವರಿಗೆ ಆತಂಕವಿದೆ. ಅದನ್ನು ಕೇಂದ್ರ ಸರ್ಕಾರ ಗಮನಿಸಿ ಪರಿಹಾರ ಕೊಡುವ ವಿಶ್ವಾಸವಿದೆ. ಆದರೆ ಈ ನೆಪದಲ್ಲಿ ಸಾರ್ವಜನಿಕ ಸ್ವತ್ತುಗಳಿಗೆ ಬೆಂಕಿ ಹಚ್ಚಿ ನಾಶ ಮಾಡುವುದು ಖಂಡಿತಾ ಕ್ಷಮಾಪಣೆಗೆ ಯೋಗ್ಯವಾದುದಲ್ಲ, ಇದರ ಹಿಂದೆ ರಾಜಕೀಯ ಪ್ರೇರಣೆ ಇರುವುದು ಸ್ಪಷ್ಟ. ಜನರು ಈ ಬಗ್ಗೆ ಸ್ವಲ್ಪ ದಿವಸದಲ್ಲಿಯೇ ಅರ್ಥ ಮಾಡಿಕೊಳ್ಳಲಿದ್ದಾರೆ ಎಂದರು.
ಗುರುದ್ವಾರದ ಮೇಲಿನ ದಾಳಿ - ಹೊಣೆ ಹೊತ್ತ ಐಸಿಸ್
ಕಾಬೂಲ್, ಜೂ. ೧೯: ಅಫ್ಘಾನಿಸ್ತಾನದ ಗುರುದ್ವಾರದ ಮೇಲಿನ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದ್ದು, ಇದು ಪ್ರವಾದಿ ಮೊಹಮ್ಮದ್ ಅವರಿಗೆ ಮಾಡಿದ ಅವಮಾನಕ್ಕೆ ಪ್ರತೀಕಾರ ಎಂದು ಹೇಳಿದೆ. ತನ್ನ ಅಮಾಕ್ ಪ್ರಚಾರ ಸೈಟ್‌ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ಶನಿವಾರದ ದಾಳಿಯು ಹಿಂದೂಗಳು ಮತ್ತು ಸಿಖ್ಖರನ್ನು ಮತ್ತು ಅಲ್ಲಾಹನ ಸಂದೇಶವಾಹಕರಿಗೆ ಬೆಂಬಲ ನೀಡುವ ಕ್ರಿಯೆಯಲ್ಲಿ ಅವರನ್ನು ರಕ್ಷಿಸಿದ ಧರ್ಮಭ್ರಷ್ಟರನ್ನು ಗುರಿಯಾಗಿಸಿಕೊಂಡಿತ್ತು ಎಂದು ಐಸಿಸ್ ಹೇಳಿದೆ. ತನ್ನ ಹೋರಾಟಗಾರರೊಬ್ಬರು ಕಾಬೂಲ್‌ನಲ್ಲಿ ಹಿಂದೂ ಮತ್ತು ಸಿಖ್ ದೇವಾಲಯಕ್ಕೆ ನುಗ್ಗಿ ಅದರ ಸಿಬ್ಬಂದಿಯನ್ನು ಕೊಂದ ನಂತರ ಮತ್ತು ಅದರೊಳಗಿದ್ದವರ ಮೇಲೆ ಮೆಷಿನ್ ಗನ್ ಮತ್ತು ಹ್ಯಾಂಡ್ ಗ್ರೆನೇಡ್‌ಗಳಿಂದ ದಾಳಿ ನಡೆಸಲಾಯಿತು ಎಂದು ಐಸಿಸ್ ಹೇಳಿದೆ. ಗುರುದ್ವಾರದಲ್ಲಿ ನಿನ್ನೆ ದಾಳೆ ವೇಳೆ ಇಬ್ಬರು ಸಾವನ್ನಪ್ಪಿದ್ದು ಕನಿಷ್ಠ ಏಳು ಮಂದಿ ಗಾಯಗೊಂಡಿದ್ದಾರೆ.ಆAತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಾಕೋರ್ ಅವರು ಗುರುದ್ವಾರವನ್ನು ಪ್ರವೇಶಿಸಿದಾಗ ದಾಳಿಕೋರರು ಗ್ರೆನೇಡ್ ಎಸೆದು ಬೆಂಕಿ ಹೊತ್ತಿಸಿದರು.
ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ಹತ
ಶ್ರೀನಗರ, ಜೂ. ೧೯: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಕುಪ್ವಾರಾ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಒಬ್ಬಾತ ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ನೊಂದಿಗೆ ಸಂಬAಧ ಹೊಂದಿರುವ ಪಾಕಿಸ್ತಾನಿಯಾಗಿದ್ದರೆ, ಎರಡನೆಯವನ ಗುರುತು ಪತ್ತೆಹಚ್ಚಲಾಗುತ್ತಿದೆ ಎಂದು ಕೂಡ ಪೊಲೀಸರು ಹೇಳಿದ್ದಾರೆ. ಬಂಧಿತ ಭಯೋತ್ಪಾದಕ ಶೋಕೆಟ್ ಅಹ್ಮದ್ ಶೇಖ್‌ನ ಮಾರ್ಗದರ್ಶನದಲ್ಲಿ ಉತ್ತರ ಕಾಶ್ಮೀರದ ಲೋಲಾಬ್ ಪ್ರದೇಶದಲ್ಲಿ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಕುಪ್ವಾರದಲ್ಲಿ ಎನ್‌ಕೌಂಟರ್ ಪ್ರಾರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಅಡಗುತಾಣಗಳ ಹುಡುಕಾಟದ ಸಮಯ ದಲ್ಲಿ, ಅಡಗಿಕೊಂಡಿದ್ದ ಭಯೋತ್ಪಾದಕರು ಪ್ರತಿದಾಳಿ ನಡೆಸಿ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದರು, ಇದರಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಯಿತು ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಸರಕಾರ ಮುಕ್ತ - ಸಿಎಂ
ಬೆAಗಳೂರು, ಜೂ. ೧೯: ಹಲವಾರು ಸಾಹಿತಿಗಳು, ಮಾಜಿ ಪ್ರಧಾನಿ ದೇವೇಗೌಡರು, ಇತರೆ ಹಿರಿಯರು, ಸ್ವಾಮೀಜಿಗಳು ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಹೇಳಿರುವ ಸಲಹೆ-ಸೂಚನೆಗಳು, ಮನವಿಗಳನ್ನು ತರಿಸಿಕೊಂಡು ಯಾವ ಬದಲಾವಣೆಗಳನ್ನು ಮಾಡಬೇಕೋ ಸರ್ಕಾರ ಮುಕ್ತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆ ವಿಚಾರವನ್ನು ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಈಗಾಗಲೇ ವೆಬ್ ಸೈಟ್‌ನಲ್ಲಿ ಹಾಕಿದ್ದು, ಆಕ್ಷೇಪವಿದ್ದರೆ ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ಭಾರತವನ್ನು, ಕರ್ನಾಟಕವನ್ನು ಕಟ್ಟಲು ಶ್ರಮಿಸಿರುವಂತಹ ಹಿರಿಯರು, ರಾಜ-ಮಹಾರಾಜರು, ಸಾಹಿತಿಗಳು, ಕಲಾವಿದರು ಇವರ ಬಗ್ಗೆ ಅಪಾರವಾದ ಗೌರವ, ಯಾವುದೇ ಕಾರಣಕ್ಕೂ ಅವರ ಗೌರವಕ್ಕೆ ಚ್ಯುತಿ ತರುವ ಕೆಲಸ ಸರ್ಕಾರ ಮಾಡುವುದಿಲ್ಲ. ಕರ್ನಾಟಕದ ಘನತೆ-ಗೌರವಗಳನ್ನು ಪಠ್ಯಪುಸ್ತಕದಲ್ಲಿಯೂ ಉಳಿಸಿಕೊಂಡು ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.
ಅಗ್ನಿಪಥ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ
ಮುಂಬೈ, ಜೂ. ೧೯: ಸಶಸ್ತç ಪಡೆಗಳಿಗೆ ಅಲ್ಪಾವಧಿಯ ನೇಮಕಾತಿ ಯೋಜನೆಯಾದ ಅಗ್ನಿಪಥ ಕುರಿತು ಮಹಾರಾಷ್ಟç ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೇಂದ್ರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು. ಇಂದು ಬಹಳಷ್ಟು ಯುವಕರು ಅಗ್ನಿಪಥ್ ಯೋಜನೆಯ ವಿರುದ್ಧ ಬೀದಿಗಿಳಿದಿದ್ದಾರೆ. ಅವರೇಕೆ ಕೋಪಗೊಂಡಿದ್ದಾರೆ? ಅವರನ್ನು ಬೀದಿಗೆ ಬರಲು ಯಾರು ಕೇಳಿದರು? ಎಂದು ಪ್ರಶ್ನಿಸಿದರು. ಯೋಜನೆಯನ್ನು ಲೇವಡಿ ಮಾಡಿದ ಉದ್ಧವ್ ಠಾಕ್ರೆ ನಾಳೆ ನೀವು ಸರ್ಕಾರವನ್ನು ನೇಮಿಸಲು ಬಯಸುತ್ತೀರಿ ಮತ್ತು ಟೆಂಡರ್‌ಗಳನ್ನು ಹೊರತರುತ್ತೀರಿ. ನೀವು ಟೆಂಡರ್‌ಗಳನ್ನು ಮುಖ್ಯಮಂತ್ರಿಗೋ ಅಥವಾ ಪ್ರಧಾನ ಮಂತ್ರಿಗಾಗಿ ಬಿಡುಗಡೆ ಮಾಡುತ್ತೀರೋ? ನೀವು ಈ ರೀತಿಯ ವಿಷಯಗಳನ್ನು ಚಲಾಯಿಸಲು ಬಯಸಿದರೆ ಎಲ್ಲದಕ್ಕೂ ನೇಮಕಾತಿ ಪರಿಕಲ್ಪನೆಯನ್ನು ಅನ್ವಯಿಸಿ. ಹೈರ್ ಅಂಡ್ ಫೈರ್.. ಯೂಸ್ ಅಂಡ್ ಥ್ರೋ ಎಂದರು.