ಭಾಗಮಂಡಲ, ಜೂ. ೧೮: ಕನ್ನಿಕೆ-ಕಾವೇರಿ ನದಿಗಳಿಗೆ ಅಡ್ಡಲಾಗಿ ಹಾದು ಹೋಗಲು ನಿರ್ಮಿಸಿರುವ ಮೇಲುಸೇತುವೆಯ ಬೃಹದಾಕಾರದ ಏಳು ಬೀಮುಗಳು ನದಿಯ ದಡದಲ್ಲಿ ಇದ್ದು, ಕೂಡಲೇ ಅದನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರತಿವರ್ಷ ಭಾಗಮಂಡಲದಲ್ಲಿ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಇರುವುದು ಸಹಜ. ಈ ಬೀಮುಗಳಿಂದಾಗಿ ಪ್ರವಾಹದ ನೀರು ಸರಾಗವಾಗಿ ಹರಿಯಲು ಅಡ್ಡಿ ಉಂಟಾಗಿ ಪ್ರವಾಹದ ನೀರು ಜನವಸತಿ ಪ್ರದೇಶಗಳಿಗೆ ನುಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬೀಮುಗಳನ್ನು ತೆರವು ಮಾಡದಿದ್ದಲ್ಲಿ ಅಂಗಡಿ ಮಳಿಗೆಗಳು, ಸುತ್ತಮುತ್ತಲಿನ ಮನೆಗಳಿಗೆ ಹಾನಿಯಾಗಿ ದುರಂತ ಸಂಭವಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ನೀಡಿದ್ದು ಆದಷ್ಟು ಶೀಘ್ರ ಇದನ್ನು ತೆರವು ಮಾಡದೇ ಹೋದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. -ಸುನಿಲ್