ಸೋಮವಾರಪೇಟೆ, ಜೂ. ೧೮: ತಾಲೂಕಿನ ಯಲಕನೂರು-ಹಳೆಮದಲಾಪುರ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದ ಸ್ಥಳೀಯರಿಗೆ ಸಮಸ್ಯೆಯಾಗಿದ್ದು, ಕಾನೂನು ಉಲ್ಲಂಘಿಸಿ ಕಲ್ಲುಗಳನ್ನು ಸ್ಫೋಟಿಸುತ್ತಿರುವುದರಿಂದ ಸುತ್ತಮುತ್ತಲಲ್ಲಿ ವಾಸ ಮಾಡಲು ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ ಮೇರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಕಲ್ಲುಗಣಿಗಾರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹಳೆಮದಲಾಪುರ ಗ್ರಾಮಸ್ಥರು, ನಿಯಮ ಮೀರಿ ಕಲ್ಲುಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಕಲ್ಲುಗಣಿಗಾರಿಕೆಯಿಂದ ಸಾರ್ವಜನಿಕ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ನಿರ್ಮಿಸಿರುವ ರಸ್ತೆ ಗುಂಡಿ ಬಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಇದರೊಂದಿಗೆ ವಾಹನಗಳು ಸಂಚರಿಸಲೂ ಕಷ್ಟಸಾಧ್ಯವಾಗಿದೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಸುತ್ತಮುತ್ತಲ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಆತಂಕದಿAದಲೇ ದಿನದೂಡುವಂತಾಗಿದೆ ಎಂದು ಆರೋಪಗಳ ಸುರಿಮಳೆಗೈದಿದ್ದಾರೆ.
ಕಲ್ಲುಕೋರೆಗೆ ನಿಗದಿ ಪಡಿಸಿದ ಸ್ಥಳಕ್ಕಿಂತ ಹೆಚ್ಚಿನ ಸ್ಥಳದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಗಡಿಕಲ್ಲುಗಳನ್ನು ಕಿತ್ತು ಮನಸೋಯಿಚ್ಛೆ ಸ್ಫೋಟ ಮಾಡುತ್ತಿದ್ದಾರೆ. ೧ ಏಕರೆಗೆ ಮಾತ್ರ ಪರವಾನಗಿ ಪಡೆದಿದ್ದರೂ ಕಾನೂನನ್ನು ಗಾಳಿಗೆ ತೂರಿ ಕಲ್ಲುಗಳನ್ನು ಒಡೆಯುತ್ತಿದ್ದಾರೆ. ಸ್ಫೋಟದ ರಭಸಕ್ಕೆ ಸುತ್ತಮುತ್ತಲಿನ ಮನೆಗಳ ಗೋಡೆಗಳು ಈಗಾಗಲೇ ಬಿರುಕುಬಿಟ್ಟಿವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಕೋರೆಯಲ್ಲಿ ಸ್ಫೋಟಕಗಳನ್ನು ಅಕ್ರಮವಾಗಿ ಶೇಖರಿಸಿಡಲಾಗಿದೆ. ಕಾನೂನು ಬಾಹಿರವಾಗಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಗ್ರಾಮಸ್ಥರ ದೂರಿನ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರೋಜಾ ಅವರು, ಸ್ಥಳೀಯರ ಅಹವಾಲುಗಳನ್ನು ಆಲಿಸಿ ಸೂಕ್ತ ಕ್ರಮದ ಭರವಸೆ ನೀಡಿದರು. ಈ ಸಂದರ್ಭ ಸರ್ಕಲ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್, ಗ್ರಾಮಲೆಕ್ಕಾಧಿಕಾರಿ ಶ್ವೇತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.