ಕುಶಾಲನಗರ, ಜೂ. ೧೮: ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನ ಸರಣಿ ಅಪಘಾತ ಸಂಭವಿಸಿ ಇಬ್ಬರು ತೀವ್ರ ಗಾಯಗೊಂಡ ಘಟನೆ ನಡೆದಿದೆ. ಮೂರು ವಾಹನಗಳು ಜಖಂಗೊAಡಿವೆ.
ಆಟೋರಿಕ್ಷಾ ರಸ್ತೆಗೆ ಅಡ್ಡವಾಗಿ ಬಂದ ಸಂದರ್ಭ ಮೈಸೂರು ಕಡೆಯಿಂದ ಕುಶಾಲನಗರ ಕಡೆಗೆ ವೇಗವಾಗಿ ಬರುತ್ತಿದ್ದ ಇನೊವಾ ಕಾರು ಡಿಕ್ಕಿಯಾಗಿ ರಸ್ತೆಯಲ್ಲಿ ಆಟೋ ಮಗುಚಿಬಿದ್ದು ದೂರಕ್ಕೆ ಎಸೆಯಲ್ಪಟ್ಟು ಚಾಲಕ ಸೇರಿದಂತೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತೀವ್ರ ಗಾಯಗೊಂಡಿದ್ದಾರೆ.
ಅಪಘಾತಕ್ಕೆ ಒಳಗಾದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಇನ್ನೊಂದು ಕಾರಿಗೆ ಡಿಕ್ಕಿಯಾಗಿ ನಿಂತಿದೆ. ಎದುರುಗಡೆ ನಿಂತಿದ್ದ ಶಾಲಾ ವಿದ್ಯಾರ್ಥಿಗಳ ವಾಹನದಲ್ಲಿದ್ದ ಮಕ್ಕಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಕುಶಾಲನಗರದ ದಂಡಿನ ಪೇಟೆಯ ರಿಜ್ವಾನ್ ಎಂಬವರು ಇನೊವಾ ಕಾರು ಚಲಿಸುತ್ತಿದ್ದು ಕೊಪ್ಪ ಗ್ರಾಮದ ನಿವಾಸಿ ರಾಮ ಎಂಬವರ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಭಾರೀ ಪ್ರಮಾಣದ ಹಾನಿಯಾಗಿದೆ.
ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಜಯಮ್ಮ ಎಂಬ ಮಹಿಳೆಗೆ ಎಡಗಾಲು ಮುರಿದಿದ್ದು ಆಟೋ ಚಾಲಕ ರಾಮ್ಗೆ ತಲೆಗೆ ಏಟು ಉಂಟಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ಸಾಗಿಸಲಾಗಿದೆ.
ಬೈಲುಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.