ಕಣಿವೆ, ಜೂ. ೧೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದ ಆರು ಎಕರೆ ಜಾಗದಲ್ಲಿ ಸುರಿಯುತ್ತಿರುವ ಕುಶಾಲನಗರ ಪಟ್ಟಣದ ಕಸ ತ್ಯಾಜ್ಯವನ್ನು ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸರಿಯಾಗಿ ನಿರ್ವಹಿಸದ ಕಾರಣ ಗ್ರಾಮದ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ದಿನಂಪ್ರತಿ ಸಂಗ್ರಹವಾಗುವ ನಾಲ್ಕಾರು ಟ್ರಾಕ್ಟರ್ ಪ್ರಮಾಣದ ಕಸ ತ್ಯಾಜ್ಯವನ್ನು ಭುವನಗಿರಿಯ ಕಸ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಸುರಿಯುತ್ತಿದ್ದು, ವೈಜ್ಞಾನಿಕ ರೀತಿಯಲ್ಲಿ ಕಸವನ್ನು ನಿರ್ವಹಿಸದ ಕಾರಣ ಕಸ ತ್ಯಾಜ್ಯವೆಲ್ಲಾ ಮಳೆಯ ನೀರಲ್ಲಿ ಕೊಳೆತು ಇಡೀ ಪರಿಸರ ಕಲುಷಿತಗೊಂಡಿದೆ. ಹಾಗಾಗಿ ಮಕ್ಕಳು, ಮಹಿಳೆಯರು ಕಸ ಸಂಗ್ರಹ ಸ್ಥಳದ ಆಸುಪಾಸಿನ ರಸ್ತೆಗಳಲ್ಲಿ ತಿರುಗಾಡಲು ಆಗುತ್ತಿಲ್ಲ. ಅಷ್ಟರ ಮಟ್ಟಿಗೆ ಕಸ ಕೊಳೆತು ದುರ್ವಾಸನೆ ಬರುತ್ತಿದೆ ಎಂದು ಸ್ಥಳೀಯರಾದ ಸುರೇಶ್, ದಶರಥ ಮೊದಲಾದವರು ಸ್ಥಳಕ್ಕೆ ತೆರಳಿದ್ದ ‘ಶಕ್ತಿ'ಯೊಂದಿಗೆ ದೂರಿಕೊಂಡರು.
ನಾಯಿಗಳ ಕಾಟ: ಕಸ ತ್ಯಾಜ್ಯದ ಬಳಿ ನಾಯಿಗಳ ಪಡೆಯೇ ಬೀಡು ಬಿಟ್ಟಿದ್ದು, ಇಡೀ ಗ್ರಾಮದ ವಾತಾವರಣ ಹದಗೆಟ್ಟಿದೆ. ಗ್ರಾಮದ ಆಸುಪಾಸಿನಲ್ಲಿ ಯಾರೊಬ್ಬರೂ ಮೂಗು ಮುಚ್ಚದೇ ಬೇರೆ ದಾರಿಯೇ ಇಲ್ಲ. ಗ್ರಾಮದ ಚಾಮಿ ಹಾಗೂ ಮಲ್ಲೇಗೌಡ ಎಂಬವರಿಗೆ ಸೇರಿದ ಎರಡು ಹಸುಗಳನ್ನು ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿ ಸಾಯಿಸಿವೆ.
ಅಲ್ಲದೇ ಗ್ರಾಮದ ರಸ್ತೆಗಳಲ್ಲಿ ಬೀಡು ಬಿಟ್ಟಿರುವ ಬೀದಿ ನಾಯಿಗಳು ಒಬ್ಬಂಟಿಗರಾಗಿ ತಿರುಗಾಡುವ ಮಹಿಳೆಯರು ಹಾಗೂ ಮಕ್ಕಳನ್ನು ಕೂಡ ಕಚ್ವಲು ಧಾವಿಸುತ್ತಿವೆ. ನಾಯಿಗಳ ಹಾವಳಿ ತಪ್ಪಿಸಬೇಕು.
ಕುಶಾಲನಗರದ ಕಸವನ್ನು ಭುವನಗಿರಿಗೆ ತರದಂತೆ ಕೂಡಿಗೆ ಗ್ರಾಮ ಪಂಚಾಯಿತಿಯವರು ತಡೆದು ವಾಪಸ್ ಕುಶಾಲನಗರಕ್ಕೆ ಕಸವನ್ನು ಒಯ್ಯುವಂತೆ ಮಾಡಬೇಕೆಂದು ಗ್ರಾಮಸ್ಥರಾದ ದಶರಥ ಹೇಳುತ್ತಾರೆ.
ದಶಕಗಳಿಂದಲೂ ಭೀಕರ ಸಮಸ್ಯೆಯಾಗಿರುವ ಕಸ ಸಮಸ್ಯೆಗೆ ಕುಶಾಲನಗರ ಪಟ್ಟಣ ಪಂಚಾಯಿತಿಯವರು ಸೂಕ್ತ ಪರಿಹಾರ ಕಂಡುಕೊAಡಿಲ್ಲ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಜಯಶೀಲ ಹಾಗೂ ಚಂದ್ರು ಜಿಲ್ಲಾಡಳಿತವನ್ನು ಪ್ರಶ್ನಿಸುತ್ತಿದ್ದಾರೆ.
ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಕ್ಕೆ ಖುದ್ದಾಗಿ ಬಂದು ಕುಶಾಲನಗರದ ಕಸದಿಂದ ಗ್ರಾಮಸ್ಥರಾದ ನಾವು ಅನುಭವಿಸುತ್ತಿರುವ ನರಕಯಾತನೆಗೆ ಕೊನೆ ಹಾಡಬೇಕೆಂದು ಸದಸ್ಯೆ ಜಯಶೀಲ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಕಸ ತ್ಯಾಜ್ಯ ಸಂಗ್ರಹ ಘಟಕದ ಸುತ್ತಲೂ ಇರುವ ಮನೆಗಳ ಆವರಣದಲ್ಲಿ ಸೊಳ್ಳೆಗಳು ಹಾಗೂ ನೊಣಗಳ ಕಾಟ ಮಿತಿಮೀರಿದೆ.
ಮನೆಗಳ ಬಳಿ ಊಟ ಮಾಡುವಾಗ, ಕಾಫಿ, ಟೀ ಸವಿಯುವಾಗ, ತಟ್ಟೆ ಲೋಟಗಳ ಮೇಲೆಲ್ಲಾ ಕೂರುವ ನೊಣಗಳ ರಾಶಿಯಿಂದಾಗಿ ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ಸಮಸ್ಯೆಗಳನ್ನು ಖುದ್ದಾಗಿ ಪರಿಹರಿಸಬೇಕು. ಇಲ್ಲದಿದ್ದಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಕಸ ಸಂಗ್ರಹ ಘಟಕದ ಬಳಿ ಧರಣಿ ಸತ್ಯಾಗ್ರಹ ಮಾಡುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.
- ಕೆ.ಎಸ್. ಮೂರ್ತಿ