ಸೋಮವಾರಪೇಟೆ, ಜೂ. ೧೪: ಮಾದಾಪುರದ ವಾಸದ ಮನೆಯೊಂದರಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿರುವ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು, ಇದಕ್ಕೆ ಕಡಿವಾಣ ಹಾಕಬೇಕೆಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದವರು ಮತ್ತು ಅವಿದ್ಯಾವಂತ ಹಿಂದೂಗಳನ್ನು ಅಪಪ್ರಚಾರದ ಮೂಲಕ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿದ ಕಾರ್ಯಕರ್ತರು, ಮಾದಾಪುರದ ಎಫ್‌ಎಂಸಿ ಬಡಾವಣೆಯ ಮನೆಯೊಂದರಲ್ಲಿ ಇಂತಹ ಕೃತ್ಯ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ತೆರಳಿ ಮತಾಂತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಸ್ಥಳದಲ್ಲಿದ್ದ ಪುಸ್ತಕಗಳು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಂಡು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸೋಮವಾರಪೇಟೆ ಪೊಲೀಸರು ಮನೆಯ ಮಾಲೀಕರು ಹಾಗೂ ಪ್ರಾರ್ಥನೆಗೆ ಹೋಗಿದ್ದವರನ್ನು ಕರೆದು ವಿಚಾರಣೆ ನಡೆಸಿದ ಸಂದರ್ಭ, ಬಲವಂತದ ಮತಾಂತರ ನಡೆಯುತ್ತಿಲ್ಲ ಎಂದು ತಿಳಿದುಬಂದ ಹಿನ್ನೆಲೆ ವಾಪಸ್ ಕಳುಹಿಸಿದ್ದಾರೆ.

ಸ್ಥಳಿಯಾಡಳಿತದಿಂದ ಯಾವುದೇ ಪರವಾನಗಿ ಪಡೆಯದೇ ವಾಸದ ಮನೆಯಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಪ್ರಾರ್ಥನೆ ಮಾಡುವುದು, ಮತಾಂತರಕ್ಕೆ ಆಮಿಷ ಒಡ್ಡುವ ಕೃತ್ಯ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.