ಗೋಣಿಕೊಪ್ಪಲು, ಜೂ. ೧೪: ಮುಂಜಾನೆಯ ವೇಳೆ ಸ್ಕೂಟರ್‌ನಲ್ಲಿ ಬರುತ್ತಿದ್ದ ಅಮಾಯಕ ಕಾರ್ಮಿಕನಿಗೆ ಎದುರಾದ ಒಂಟಿ ಸಲಗದ ದಾಳಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟ ಕೋಣನಕಟ್ಟೆ, ಸಮೀಪದ ಧನುಗಾಲ ಗ್ರಾಮದ ಮಾರಿಯಮ್ಮ ಕಾಲೋನಿಯ ಯರವರ ಚಾಮ ಎಂಬವರ ಮನೆಗೆ ಪೊನ್ನಂಪೇಟೆ ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ ವೈಯಕ್ತಿಕವಾಗಿ ೫ ಸಾವಿರ ಹಣವನ್ನು ಚಾಮನ ಪತ್ನಿ ಸುಬ್ಬಿಗೆ ನೀಡಿದರು.

ಗ್ರಾಮದ ಸುತ್ತಮುತ್ತಲಿನಲ್ಲಿ ಕಾಡಾನೆ ಹಾಗೂ ವನ್ಯ ಪ್ರಾಣಿಗಳ ಓಡಾಟ ಹೆಚ್ಚಿರುವುದರಿಂದ ದಿನನಿತ್ಯದ ಕೆಲಸಕ್ಕೆ ತೆರಳುವ ವೇಳೆ ಹಾಗೂ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ತೆರಳುವ ಸಂದರ್ಭ ಎಚ್ಚರಿಕೆ ವಹಿಸುವಂತೆ ಇದೇ ಸಂದರ್ಭ ಅಧಿಕಾರಿ ಗುರುಶಾಂತಪ್ಪ ಚಾಮ ಅವರ ಪತ್ನಿ ಹಾಗೂ ಮಕ್ಕಳಿಗೆ ತಿಳಿ ಹೇಳಿದರು. ಅಗತ್ಯಬಿದ್ದಲ್ಲಿ ಇಲಾಖೆ ವತಿಯಿಂದ ದಾಖಲಾತಿಗಳನ್ನು ಒದಗಿಸಿ ಕೊಡುವುದಾಗಿ ಈ ವೇಳೆ ಭರವಸೆ ನೀಡಿದರು.