ಕೂಡಿಗೆ, ಜೂ. ೧೪: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ಕೊಡಗು ಸೈನಿಕ ಶಾಲೆಯ ಆವರಣಕ್ಕೆ ಹೊಂದಿಕೊAಡAತೆ ಹರಿಯುತ್ತಿರುವ ಹಾರಂಗಿ ನದಿ ದಡದಲ್ಲಿ ರೂ. ೪.೫೦ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ತಡೆಗೋಡೆ ಕಾಮಗಾರಿ ಭರದಿಂದ ಸಾಗುತ್ತಿದೆ.
ಸೈನಿಕ ಶಾಲೆಯ ಸಮೀಪದ ತಡೆಗೋಡೆ ಕಾಮಗಾರಿಗೆ ಕಳೆದ ತಿಂಗಳು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭೂಮಿಪೂಜೆ ನೆರವೇರಿಸಿದ್ದರು. ಗುತ್ತಿಗೆದಾರ ಹೊಳೆನರಸೀಪುರದ ರಾಮಚಂದ್ರ ಟೆಂಡರ್ ಪಡೆದು ಹಾರಂಗಿ ನದಿ ದಂಡೆಯಲ್ಲಿ ಶಾಲೆಯ ಆವರಣಕ್ಕೆ ನದಿಯ ನೀರು ಬರದಂತೆ ೨೫೦ ಮೀಟರ್ ಉದ್ದದ ಕಾಂಕ್ರೀಟ್ ಗೋಡೆ ತಳ ಭಾಗದಿಂದ ೩.೬೦ ಮೀಟರ್ ಎತ್ತರದ ಬೃಹತ್ ಗಾತ್ರದ ಕಾಂಕ್ರೀಟ್ ಗೋಡೆ ಕಾಮಗಾರಿ ಆರಂಭಿಸಿದ್ದಾರೆ. ಈಗಾಗಲೇ ಕಾವೇರಿ ನೀರಾವರಿ ನಿಗಮದ ಮೂಲಕ ಹಣ ಬಿಡುಗಡೆಯಾದ ಹಿನ್ನೆಲೆ ಮುಂದಿನ ದಿನಗಳಲ್ಲಿ ಮಳೆಗಾಲದ ಆರಂಭದ ಮುನ್ನ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಶೇ.೭೦ ಭಾಗದಷ್ಟು ಮುಗಿದಿದ್ದು, ಶಾಲೆ ಬಲ ಭಾಗದಲ್ಲಿ ಬಂದಿರುವ ಆನೆ ಕೆರೆಯ ನೈಸರ್ಗಿಕ ನಾಲೆಯ ಅಭಿವೃದ್ಧಿಯ ಕಾಮಗಾರಿ ಮತ್ತು ನಾಲೆಯ ನೀರು ನದಿಗೆ ಹೋಗಲು ಆಧುನಿಕ ತಂತ್ರಜ್ಞಾನದ ಕಟ್ಟಡದ ನಿರ್ಮಾಣ ಜೊತೆಗೆ ಗೇಟ್ ಅಳವಡಿಕೆ ಕಾರ್ಯ ಭರದಿಂದ ಸಾಗುತ್ತಿದೆ.
ಕಾಮಗಾರಿಯನ್ನು ಹಾರಂಗಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್, ಇಂಜಿನಿಯರ್ ಕಿರಣ್ ಕುಮಾರ್ ಸೇರಿದಂತೆ ಗುತ್ತಿಗೆದಾರ ವಿಭಾಗ ಇಂಜಿನಿಯರ್ ವೀಕ್ಷಣೆ ಮಾಡಿದರು.