ಸುಂಟಿಕೊಪ್ಪ, ಜೂ. ೧೩: ಊರಿನಲ್ಲಿ ಹೋಗಲೀ ಜಿಲ್ಲೆಯಲ್ಲೇ ವಾಸವಿಲ್ಲದ ಕುಟುಂಬವೊAದಕ್ಕೆ ಇಲ್ಲಿನ ಕಂದಾಯ ಇಲಾಖೆ ಆದಾಯ ದೃಢೀಕರಣ ಪತ್ರ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.
ಸುAಟಿಕೊಪ್ಪ ಹೋಬಳಿಯ ಉಲುಗುಲಿ ಗ್ರಾಮದ ನಿವಾಸಿಗಳೆಂದು ಉಲ್ಲೇಖಿಸಿ ಉಪತಹಶೀಲ್ದಾರ್ ತಮ್ಮ ಸಂಬAಧಿಕರ ಕುಟುಂಬಕ್ಕೆ ನೀಡಿರುವ ಆದಾಯ ದೃಢೀಕರಣ ಪತ್ರದ ಪ್ರತಿ ಲಭ್ಯವಾಗಿದೆ. ಆರ್ಡಿ ೦೦೩೯೧೨೨೦೬೪೨೭೯ ಪತ್ರದಲ್ಲಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಕುಟುಂಬದ ವಿಳಾಸವನ್ನು ಉಲುಗುಲಿ ಗ್ರಾಮ ಸುಂಟಿಕೊಪ್ಪ ಹೋಬಳಿ ಎಂದು ನಮೂದಿಸಿ, ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. ೧ ಲಕ್ಷ ಎಂದು ದೃಢೀಕರಿಸಲಾಗಿದೆ.
ಸಾಮಾನ್ಯವಾಗಿ ಸಾರ್ವಜನಿಕರು ನಾಡಕಚೇರಿಯಲ್ಲಿ ಆದಾಯ, ಜಾತಿ ಮತ್ತು ಇತರ ದೃಢೀಕರಣ ಪತ್ರಗಳಿಗೆ ಸಾಕಷ್ಟು ಬಾರಿ ದಾಖಲಾತಿಗಳನ್ನು ಒದಗಿಸಿದರೂ ನಾನಾ ಕಾರಣಗಳನ್ನು ಹೇಳಿ ತಿರಸ್ಕೃತ ಅಥವಾ ಪುನರ್ ಪರಿಶೀಲನೆಗೆ ಕಳುಹಿಸಲಾಗುತ್ತದೆ. ಇಲ್ಲವಾದರೆ ಹೊಸದಾಗಿ ಅರ್ಜಿ ಸಲ್ಲಿಸಲು ಹೇಳಲಾಗುತ್ತದೆ ಎಂಬ ದೂರು ನಿತ್ಯವು ಕೇಳಿ ಬರುತ್ತಿದೆ. ಗ್ರಾಮ ಲೆಕ್ಕಿಗರು ತಮ್ಮ ಹಂತದಲ್ಲಿ ಪರಿಶೀಲನೆ ಮಾಡಿದರೂ ಕೆಲವು ಸಂದರ್ಭದಲ್ಲಿ ಮೇಲಿನ ಅಧಿಕಾರಿ ತಿರಸ್ಕರಿಸುವುದೂ ಇದೆ. ಆದರೆ ಇಲ್ಲಿ ಊರಿನಲ್ಲೇ ಇಲ್ಲದ ಕುಟುಂಬಕ್ಕೆ ಯಾವದೇ ದಾಖಲೆಗಳಿಲ್ಲದೆ ಆದಾಯ ದೃಢೀಕರಣ ನೀಡಿರುವದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂದು ನಾಮಫಲಕ ಹಾಕಿದ್ದರೂ ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಕೆಲವು ಅಧಿಕಾರಿಗಳು ಇಂತಹ ಕಾಯಕದಲ್ಲಿ ತೊಡಗಿಸಿಕೊಂಡಿರುವದು ಆಡಳಿತ ವರ್ಗವನ್ನೇ ಪ್ರಶ್ನಿಸುವಂತಾಗಿದೆ. ಇದೀಗ ಈ ವಿಚಾರ ಊರಲ್ಲೆಲ್ಲ ಹಬ್ಬಿದ್ದು, ಇದರ ಬಗ್ಗೆ ಪರಿಶೀಲನೆ ಮಾಡಿ ಸಂಬAಧಿಸಿದ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. -ವಿಶ್ವಾಸ್