ಶನಿವಾರಸAತೆ, ಜೂ. ೧೩: ಅಬ್ಬಾ... ಇದೆನಪ್ಪಾ ಈ ಕುಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಾ... ಅಂತ ಹುಬ್ಬೇರಿಸಬೇಡಿ ಇದು ಸ್ಕೂಲ್ ಬ್ಯಾಂಕ್ ಆಫ್ ಮುಳ್ಳೂರು. ಶಿಕ್ಷಕ ಸತೀಶ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳ್ಳೂರಿನಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಿರುವ ಬ್ಯಾಂಕ್ ಇದು. ಸಂಪಾದನೆಯನ್ನು ಪ್ರೋತ್ಸಾಹಿಸಲು ಮಾಡಿರುವ ಬ್ಯಾಂಕ್ ಅಲ್ಲ ಬದಲಿಗೆ ಮಕ್ಕಳಲ್ಲಿ ಜಂಕ್ ಫುಡ್‌ಗಳ ಸೇವನೆಯನ್ನು ಮಿತಗೊಳಿಸಿ ಉಳಿತಾಯ ಮನೋಭಾವನೆಯನ್ನು ಪ್ರೋತ್ಸಾಹಿಸಿ ಬ್ಯಾಂಕಿAಗ್ ವ್ಯವಹಾರಗಳ ಅರಿವು ಮೂಡಿಸುವ ಸಲುವಾಗಿ ಶಾಲೆಯಲ್ಲಿ ಸ್ಥಾಪಿತವಾಗಿರುವ ಬ್ಯಾಂಕಿAಗ್ ವ್ಯವಸ್ಥೆ.

ಹೇಗಿದೆ ಸ್ಕೂಲ್ ಬ್ಯಾಂಕ್: ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ೩೭ ವಿದ್ಯಾರ್ಥಿಗಳಿಗೂ ಒಂದೊAದು ಲಾಕರ್ ಒಳಗೊಂಡAತೆ ಒಂದು ಖಜಾನೆಯನ್ನು ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ತಮ್ಮ ಲಾಕರ್‌ಗಳಲ್ಲಿ ತಾವು ವಾರದ ದಿನಗಳಲ್ಲಿ ಉಳಿಸಿರುವ ಚಿಲ್ಲರೆ ಹಣಗಳನ್ನು ತಂದು ಹಾಕುತ್ತಾರೆ. ಶಿಕ್ಷಕರು ಅದನ್ನು ವಿದ್ಯಾರ್ಥಿಗಳಿಗೆ ನೀಡಿರುವ ಪಾಸ್ ಬುಕ್‌ಗಳಲ್ಲಿ ನಮೂದಿಸುವುದರ ಜೊತೆಗೆ ಖಜಾನೆಯಲ್ಲಿ ಇಟ್ಟಿರುವ ಲೆಡ್ಜರ್‌ನಲ್ಲಿ ಕೂಡ ಬರೆದುಕೊಳ್ಳುತ್ತಾರೆ. ನೂರು ರೂ. ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ಬೋನಸ್ ಆಗಿ ಒಂದು ಪೆನ್ಸಿಲ್. ೨೦೦ ರೂ. ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ೧ ಪೆನ್, ೩೦೦ ರೂ. ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ವಿದ್ಯಾರ್ಥಿಗಳಲ್ಲಿ ಬಡ್ಡಿಯ ಬಗ್ಗೆ ಅರಿವು ಮೂಡಿಸಲು ೫೦೦ ರೂ. ಸಂಗ್ರಹ ಮಾಡಿದ ವಿದ್ಯಾರ್ಥಿಗಳಿಗೆ ೫ ಪರ್ಸೆಂಟ್ ಬಡ್ಡಿಯನ್ನು ಶಿಕ್ಷಕರೇ ನೀಡುವುದರ ಮೂಲಕ ಉಳಿತಾಯಕ್ಕೆ ಪ್ರೋತ್ಸಾಹಿಸಲಾಗುತ್ತಿದೆ.

ಸಾವಿರ ರೂ. ಉಳಿತಾಯ ಪೂರೈಸಿದ ವಿದ್ಯಾರ್ಥಿಯ ಹಣವನ್ನು ಆನ್‌ಲೈನ್ ಮುಖಾಂತರ ನೇರವಾಗಿ ವಿದ್ಯಾರ್ಥಿಯ ನಿಜವಾದ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ ಎಂದು ಶಿಕ್ಷಕ ಸತೀಶ್ ತಿಳಿಸಿದ್ದಾರೆ. ಸಂಗ್ರಹಿಸಿದ ಹಣವನ್ನು ವರ್ಷಾಂತ್ಯದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ, ಶಾಲಾ ವಾರ್ಷಿಕೋತ್ಸವಕ್ಕೆ ಲೇಖನ ಸಾಮಗ್ರಿಗಳನ್ನು ಕೊಳ್ಳಲು ಬಳಸಿಕೊಳ್ಳಬಹುದಾಗಿದೆ.

ಬ್ಯಾಂಕಿAಗ್ ವ್ಯವಹಾರದ ಅನುಭವ ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳು ಚಲನ್ ತುಂಬಿ ಹಣ ಕಟ್ಟುವ ಹಾಗೂ ವಿತ್‌ಡ್ರ‍್ರಾ ಫಾರ್ಮ್ ಮತ್ತು ಚೆಕ್ ಮುಖಾಂತರ ಹಣ ಹಿಂಪಡೆಯುವ ಯೋಜನೆಯನ್ನು ಕೂಡ ಒದಗಿಸಲಾಗಿದೆ. ವಿದ್ಯಾರ್ಥಿಗಳ ಅನುಭವಕ್ಕಾಗಿ ಬ್ಯಾಂಕ್ ಆಡಳಿತ ಮಂಡಳಿಯನ್ನು ಕೂಡ ರಚಿಸಲಾಗಿದ್ದು, ತನ್ವಿ ಎಂ.ಎ. ಸ್ಕೂಲ್ ಬ್ಯಾಂಕ್ ಆಫ್ ಮುಳ್ಳೂರಿನ ಮ್ಯಾನೇಜರಾಗಿ, ಪುಣ್ಯ ಅಕೌಂಟೆAಟ್ ಆಗಿ, ವಿದ್ಯಾ ಎಂ.ಎಲ್. ಕ್ಯಾಶಿಯರ್ ಆಗಿ ನೇಮಕಗೊಂಡಿದ್ದಾರೆ.

-ನರೇಶ್ಚAದ್ರ, ಶನಿವಾರಸಂತೆ