ಡಾ. ಕೃಷ್ಣಮೂರ್ತಿ

ಗೋಣಿಕೊಪ್ಪ ವರದಿ, ಜೂ. ೧೨: ಕೃಷಿಯಲ್ಲಿ ವೈವಿಧ್ಯತೆ ಅಳವಡಿಸಿಕೊಳ್ಳುವುದರಿಂದ ಹೆಚ್ಚು ಅನ್ವೇಷಣೆಗೆ ಸಹಕಾರಿಯಾಗುತ್ತದೆ ಎಂದು ಕೂಡಿಗೆ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪ ನಿರ್ದೇಶಕ ಡಾ. ಕೃಷ್ಣಮೂರ್ತಿ ಹೇಳಿದರು.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕೂಡಿಗೆ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಸಹಯೋಗದಲ್ಲಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಆಯೋಜಿಸಿದ್ದ ಸುಧಾರಿತ ಪಶು ಪಾಲನೆ ಮತ್ತು ಹೈನುಗಾರಿಕೆ ಪದ್ಧತಿಗಳ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಕೈಪಿಡಿ ಬಿಡುಗಡೆ ಗೊಳಿಸಿ ಮಾತನಾಡಿ, ಹಸು, ಹಂದಿ, ಮೇಕೆ ಸಾಕಾಣೆಗೆ ಒತ್ತು ನೀಡಬೇಕು ಎಂದರು.

ಕೆ.ವಿ.ಕೆ. ಪಶು ವೈದ್ಯ ಡಾ. ಎಸ್.ಸಿ. ಸುರೇಶ್ ಮಾತನಾಡಿ, ಹಂದಿ ಮಾಂಸಕ್ಕೆ ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಇರುವುದರಿಂದ ಹಂದಿ ಸಾಕಾಣಿಕೆ ಹೆಚ್ಚು ಲಾಭಕರ. ಹೆಚ್ಚು ತೂಕ ಬರುವ ಮಾಂಸ, ತುಪ್ಪದ ಪ್ರಮಾಣ ಕಡಿಮೆ ಇರುವ ಮಾಂಸ ಹೊಂದಿರುವ ಹಂದಿಗಳ ತಳಿಗಳಿವೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವ ಹಂದಿ ಸಾಕಾಣಿಕೆಯಿಂದ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಲಿದೆ.

ಹಂದಿಗಳಿಗೆ ರೋಗಗಳು ಬಾರದಂತೆ ಮುಂಜಾಗ್ರತೆ ಅವಶ್ಯ. ವೈಜ್ಞಾನಿಕ ಆಹಾರ ಪದ್ಧತಿಯಿಂದ ರೋಗ ತಡೆಯಲು ಸಾಧ್ಯವಿದೆ. ವೈರಸ್‌ನಿಂದ ಸಾವು ಸಂಭವಿಸದAತೆ ಎಚ್ಚರವಹಿಸಬೇಕು ಎಂದರು. ಪಶು ವೈದ್ಯ ಡಾ. ಚಂದ್ರಶೇಖರ್ ಮಾತನಾಡಿ, ಶುದ್ಧ ಹಾಲು ಉತ್ಪಾದಿಸುವ ಮೂಲಕ ಸ್ಥಳೀಯವಾಗಿ ಮಾರುಕಟ್ಟೆ ಸೃಷ್ಠಿಸಲು ಅವಕಾಶವಿದೆ. ಹಾಲು ಸ್ವಚ್ಛ ಹಾಗೂ ಗುಣಮಟ್ಟದಿಂದ ಕೂಡಿರುವಾಗ ಜನರು ಸ್ಥಳೀಯವಾಗಿ ಖರೀದಿಸಲು ಮುಂದಾಗುತ್ತದೆ. ಇದರ ಲಾಭ ಪಡೆದುಕೊಂಡು ಹೈನುಗಾರಿಕೆ ಮುಂದುವರಿಸಬಹುದು. ಸಮಗ್ರ ಕೃಷಿ ಪದ್ಧತಿಯಲ್ಲಿ ಹೈನುಗಾರಿಕೆ ಹೆಚ್ಚು ಲಾಭಕರವಾಗಿದೆ ಎಂದರು.

ಶಿಬಿರಾರ್ಥಿಗಳು ಹಾಗೂ ತಜ್ಞರ ನಡುವೆ ಸಂವಾದ ನಡೆಯಿತು. ಪೊನ್ನಂಪೇಟೆ ತಾಲೂಕು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಎ.ಎಸ್. ಶಾಂತೇಶ್ ಇದ್ದರು.