ಕೊಡ್ಲಿಪೇಟೆ, ಜೂ. ೧೨: ಸರ್ಕಾರಿ ಜಾಗದಲ್ಲಿ ಕಳೆದ ಅನೇಕ ದಶಕಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಮಂದಿಗೆ ಸರ್ಕಾರದಿಂದ ಹಕ್ಕುಪತ್ರ ನೀಡುತ್ತಿದ್ದು, ಈ ಜಾಗವನ್ನು ಯಾವುದೇ ಕಾರಣಕ್ಕೂ ಪರಭಾರೆ ಮಾಡ ಬಾರದು. ಒಂದು ವೇಳೆ ಪರಭಾರೆ ಯಾದರೆ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳ ಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಎಚ್ಚರಿಕೆ ನೀಡಿದರು.
ಕಂದಾಯ ಇಲಾಖೆ ವತಿಯಿಂದ ಕೊಡ್ಲಿಪೇಟೆಯ ಬಸವೇಶ್ವರ ಸಮು ದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ೧೩೯ ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ಜಾಗದ ದಾಖಲೆಗಳಿಲ್ಲದೆ ಹಲವಷ್ಟು ಮಂದಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ವಾಗುತ್ತಿರಲಿಲ್ಲ. ಇದನ್ನು ಮನಗಂಡ ರಾಜ್ಯ ಸರ್ಕಾರ ಕಂದಾಯ ಇಲಾಖೆಯ ಮೂಲಕ ನಿವೇಶನ ಹಕ್ಕುಪತ್ರವನ್ನು ನೀಡುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಪರಭಾರೆ ಮಾಡಬಾರದು. ಈಗಿರುವ ಮನೆಗಳನ್ನು ಇನ್ನಷ್ಟು ಸುಸಜ್ಜಿತಗೊಳಿಸಿ ನೆಮ್ಮದಿಯ ಜೀವನ ಕಂಡುಕೊಳ್ಳಬೇಕು ಎಂದು ಶಾಸಕರು ಕಿವಿಮಾತು ಹೇಳಿದರು.
ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ೬೦೦ಕ್ಕೂ ಅಧಿಕ ಅರ್ಜಿಗಳು ೯೪ಸಿ. ಅಡಿಯಲ್ಲಿ ಸಲ್ಲಿಕೆಯಾಗಿವೆ. ಇಂದು ೧೩೯ ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ. ೧೦೧ ಮಂದಿಗೆ ನೋಟೀಸ್ ನೀಡಿದ್ದರೂ ನಿಗದಿತ ಹಣವನ್ನು ಸರ್ಕಾರಕ್ಕೆ ಪಾವತಿಸಿಲ್ಲ. ನೋಟೀಸ್ ಪಡೆದು ಕೊಂಡವರು ನಿಗದಿತ ಶುಲ್ಕವನ್ನು ಪಾವತಿಸಿ ಹಕ್ಕುಪತ್ರ ಪಡೆದುಕೊಳ್ಳಬೇಕು ಎಂದು ರಂಜನ್ ಕರೆ ನೀಡಿದರು. ತಮ್ಮ ನಿವೇಶನಕ್ಕೆ ಸರ್ಕಾರದಿಂದ ನೀಡುವ ಹಕ್ಕುಪತ್ರ ದಾಖಲೆ ಯಾಗಿರುತ್ತದೆ. ಈ ಅವಕಾಶವನ್ನು ಯಾವುದೇ ಕಾರಣಕ್ಕೂ ಕೈಚೆಲ್ಲ ಬಾರದು. ಮಾರ್ಚ್ ಅಂತ್ಯದವರೆಗೆ ೩೧೮ ಹೊಸ ಅರ್ಜಿಗಳು ಸಲ್ಲಿಕೆ ಯಾಗಿವೆ. ೧೦೧ ಹಕ್ಕುಪತ್ರಗಳು ವಿತರಣೆಗೆ ಸಿದ್ಧವಾಗಿವೆ. ಉಳಿದ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಕಂದಾಯ ಇಲಾಖೆಗೆ ಸೂಚಿಸಲಾಗಿದ್ದು, ಸರ್ಕಾರದ ನಿಯಮಾನುಸಾರ ಎಲ್ಲರಿಗೂ ಹಕ್ಕುಪತ್ರ ವಿತರಿಸಲಾಗುವುದು ಎಂದರು.
ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟಾರೆ ೭ ಸಾವಿರದಷ್ಟು ಹಕ್ಕುಪತ್ರ ಗಳನ್ನು ವಿತರಿಸಲು ಕ್ರಮ ಕೈಗೊಳ್ಳ ಲಾಗಿದೆ. ಇದರಿಂದಾಗಿ ಬಡವರು ತಮ್ಮ ಮನೆಗೆ ದಾಖಲೆ ಹೊಂದಿ ಕೊಳ್ಳುವುದರ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರಾಕೃತಿಕ ವಿಕೋಪ ಸಂದರ್ಭ ಸರ್ಕಾರದ ಪರಿಹಾರ ಪಡೆದುಕೊಳ್ಳಲೂ ಸಹ ಹಕ್ಕುಪತ್ರ ಸಹಕಾರಿಯಾಗಿದೆ. ದಾಖಲೆಗಳನ್ನು ಜೋಪಾನವಾಗಿಟ್ಟುಕೊಳ್ಳಬೇಕು. ಜಾಗ ಹಾಗೂ ಹಕ್ಕುಪತ್ರವನ್ನು ಯಾರಿಗೂ ಪರಭಾರೆ ಮಾಡಬಾರದು ಎಂದು ಸಲಹೆ ನೀಡಿದರು.
ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು, ಉಪ ತಹಶೀಲ್ದಾರ್ ಪುರುಷೋತ್ತಮ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಪೊಲೀಸ್ ಇನ್ಸ್ಪೆಕ್ಟರ್ ಪರಶಿವ ಮೂರ್ತಿ, ಪ್ರಮುಖರಾದ ನಾಗರಾಜ್, ಬಾಬುರಾಜೇಂದ್ರ ಪ್ರಸಾದ್, ಭಗವಾನ್, ಕ್ಯಾತೆ ಶಿವು, ಹೆಬ್ಬುಲುಸೆ ಮನು, ಕೆಂಚೇಶ್ವರ್, ಕುಶಾಲಪ್ಪ, ಇಂದ್ರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಅಧಿಕಾರಿಗಳನ್ನು ಹೊಗಳಿದ ಶಾಸಕರು
ಎರಡನೇ ಶನಿವಾರ ಸರ್ಕಾರಿ ರಜೆ ಇದ್ದರೂ ಸಹ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಕಂದಾಯ ಇಲಾಖೆಯ ಅಧಿಕಾರಿ ಗಳನ್ನು ಶಾಸಕ ಅಪ್ಪಚ್ಚು ರಂಜನ್ ಅವರು ಹೊಗಳಿದರು. ‘ನಾವು ರಾಜ ಕಾರಣಿಗಳು ದಿನದ ೨೪ ಗಂಟೆಯೂ ಓಡಾಟ ನಡೆಸುತ್ತೇವೆ. ಬೇಕಾದಾಗ ವಿಶ್ರಾಂತಿ ಪಡೆಯುತ್ತೇವೆ. ಆದರೆ ಅಧಿಕಾರಿಗಳಿಗೆ ಸರ್ಕಾರಿ ರಜಾ ದಿನಗಳಂದು ಮಾತ್ರ ವಿಶ್ರಾಂತಿ ಇರುತ್ತದೆ. ಹಲವಷ್ಟು ಅಧಿಕಾರಿಗಳು ಎರಡನೇ ಶನಿವಾರ ಹಾಗೂ ಭಾನುವಾರ ಊರಿಗೆ ತೆರಳಿದ್ದಾರೆ. ಆದರೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ರಜೆ ಇದ್ದರೂ ಬಡವರಿಗೆ ಹಕ್ಕುಪತ್ರ ನೀಡಲು ನಮ್ಮೊಂದಿಗೆ ಆಗಮಿಸಿದ್ದಾರೆ. ಎಲ್ಲರ ಪರವಾಗಿ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ’ ಎಂದು ರಂಜನ್ ಹೇಳಿದರು.