ಮಡಿಕೇರಿ, ಜೂ. ೧೦: ಆಜಾನ್ ವಿಷಯಕ್ಕೆ ಸಂಬAಧಿಸಿದAತೆ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಮಡಿಕೇರಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ.

ಪ್ರಮೋದ್ ಮುತಾಲಿಕ್ ಅವರು ಮಾಡಿರುವ ಪ್ರಚೋದನಾಕಾರಿ ಭಾಷಣ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಪ್ರಸಾರವಾಗಿದೆ. ದ್ವೇಷ ಭಾಷಣದ ವೀಡಿಯೋ ವೈರಲ್ ಆಗಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ನೋವಾಗಿದೆ. ಸಮಾಜದಲ್ಲಿ ಸಾಮರಸ್ಯ ಕದಡಲು ಮುಂದಾಗಿರುವ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.

ಸಾಮರಸ್ಯದ ಸಮಾಜವನ್ನು ಒಡೆದು ಅಶಾಂತಿ ಮೂಡಿಸುವ ರೀತಿಯಲ್ಲಿ ಭಾಷಣ ಮಾಡಿದ ಪ್ರಮೋದ್ ಮುತಾಲಿಕ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ದೂರು ನೀಡಲಾಗಿದೆ.

ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ. ಪೀಟರ್, ಪ್ರಧಾನ ಕಾರ್ಯದರ್ಶಿ ಎಂ.ಎ. ಫಯಾಜ್, ಉಪಾಧ್ಯಕ್ಷ ಸುನೀಲ್ ಗೌನ್ಸೆಲ್ವೆಸ್ ಹಾಗೂ ಖಜಾಂಚಿ ಎಂ.ಹೆಚ್. ಅಝೀಜ್ ದೂರು ನೀಡುವ ಸಂದರ್ಭ ಹಾಜರಿದ್ದರು.