ಶನಿವಾರಸಂತೆ, ಜೂ. ೯: ಸಮೀಪದ ಬಿಜಾಪುರ ಕಾಲೋನಿಯ ನಿವಾಸಿ ಕೂಲಿ ಕಾರ್ಮಿಕ ನಾಗೇಶ್ (೨೭) ಮನೆಯೊಳಗೆ ಸತ್ತು ಬಿದ್ದಿದ್ದು, ವಾರಸುದಾರರು ಇಲ್ಲದ ಕಾರಣ ಸ್ಥಳೀಯ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಮೃತ ಶರೀರವನ್ನು ಅಲ್ಲಿನ ಶವಾಗಾರದಲ್ಲಿ ಇರಿಸಲಾಗಿದೆ.

ಕೂಲಿ ಕಾರ್ಮಿಕ ನಾಗೇಶ್ ಬಿಜಾಪುರ ಕಾಲೋನಿಯಲ್ಲಿ ಸಾಕುತಂದೆ ರಾಜೇಗೌಡರ ಜೊತೆಯಲ್ಲಿ ವಾಸಿಸುತ್ತಿದ್ದ. ಮನೆಯ ಮಾಲೀಕರಾದ ಗೌರಮ್ಮ ಬೆಂಗಳೂರಿನಲ್ಲಿ ನೆಲೆಸಿದ್ದು, ಇಬ್ಬರು ೧೦ ವರ್ಷಗಳಿಂದ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಸಿಕ್ಕಿದ ಕಡೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.

೫ ವರ್ಷಗಳ ಹಿಂದೆ ರಾಜೇಗೌಡ ಮರಣ ಹೊಂದಿದ್ದು, ಮನೆಯಲ್ಲಿ ನಾಗೇಶ್ ಒಂಟಿಯಾಗಿಯೇ ವಾಸವಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದನು. ಸಾಕು ತಂದೆಯ ಮರಣದ ನಂತರ ಮದ್ಯವ್ಯಸನಿಯಾಗಿದ್ದ ನಾಗೇಶ್, ತಾ. ೮ರಂದು ವಿಪರೀತ ಮದ್ಯಪಾನ ಮಾಡಿ ಗೋಪಾಲಪುರ ಗ್ರಾಮದ ನೀರಿನ ಟ್ಯಾಂಕ್ ಬಳಿ ಕುಳಿತಿದ್ದುದಾಗಿ ಪ್ರತ್ಯಕ್ಷದರ್ಶಿ ಗ್ರಾಮಸ್ಥರು ತಿಳಿಸಿದ್ದಾರೆ. ತಾ. ೯ರಂದು ರವಿ ಎಂಬವರು ಕೆಲಸಕ್ಕೆ ಕರೆಯಲು ಮನೆಗೆ ಬಂದಾಗ ನಾಗೇಶ್ ನೆಲದ ಮೇಲೆ ಅಂಗಾತವಾಗಿ ಸತ್ತು ಬಿದ್ದಿದ್ದನ್ನು ಗಮನಿಸಿ ಮನೆ ನೋಡಿಕೊಳ್ಳುತ್ತಿದ್ದ ನಿಡ್ತ ಗ್ರಾಮ ಪಂಚಾಯಿತಿ ಸದಸ್ಯೆ ಜ್ಯೋತಿ ಅವರಿಗೆ ತಿಳಿಸಿದ್ದಾರೆ.

ನಾಗೇಶನ ಮೃತದೇಹ ಗಮನಿಸಿದ ಜ್ಯೋತಿಯವರು ಆತನ ವಿಳಾಸ ತಿಳಿಯದ ಕಾರಣ ಸರಿಯಾಗಿ ಆಹಾರ ಸೇವಿಸದೇ ವಿಪರೀತ ಮದ್ಯಪಾನ ಮಾಡಿ ನಿತ್ರಾಣಗೊಂಡು ಮೃತಪಟ್ಟಿರಬಹುದು ಎಂದು ದೂರು ನೀಡಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಪಿ.ಎಸ್.ಐ. ಗೋವಿಂದ್‌ರಾಜು, ಎಎಸ್‌ಐ ಶಶಿಧರ್, ಹೆಡ್‌ಕಾನ್ಸ್ಟೇಬಲ್ ಬೋಪಣ್ಣ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೃತ ನಾಗೇಶನ ಶವವನ್ನು ಮಡಿಕೇರಿಯ ಶವಾಗಾರದಲ್ಲಿ ಇರಿಸಲಾಗಿದ್ದು, ವಾರಸುದಾರರು ಇದ್ದಲ್ಲಿ ಮಡಿಕೇರಿಯ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ : ೦೮೨೭೨-೨೨೮೩೩೦ ಹಾಗೂ ಶನಿವಾರಸಂತೆ ಪೊಲೀಸ್ ಠಾಣೆ : ೦೮೨೭೬-೨೮೩೩೩೩ನ್ನು ಸಂಪರ್ಕಿಸುವAತೆ ಇನ್ಸ್ಪೆಕ್ಟರ್ ಪರಶಿವಮೂರ್ತಿ ಮನವಿ ಮಾಡಿದ್ದಾರೆ.