ಸೋಮವಾರಪೇಟೆ, ಜೂ. ೯: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಿಲ್ಲಾ ಅಪ್ಪು ಅಭಿಮಾನಿಗಳ ಬಳಗ ಆಯೋಜಿಸಿದ್ದ ರಾಜ್ಯಮಟ್ಟದ ಅಪ್ಪು ಕಪ್ ಫೈನಲ್ಸ್ನಲ್ಲಿ ಐಗೂರಿನ ಸಜಿ ಫ್ರೆಂಡ್ಸ್ ತಂಡ ಜಯಗಳಿಸುವ ಮೂಲಕ ಪ್ರಶಸ್ತಿ ಹಾಗೂ ರೂ. ೧ ಲಕ್ಷ ನಗದು ಬಹುಮಾನವನ್ನು ಪಡೆದುಕೊಂಡಿತು.

ಫೈನಲ್ ಪಂದ್ಯಾಟದಲ್ಲಿ ಕರ್ಕಳ್ಳಿಯ ಟೀಮ್ ವಿರಾಟ್ ತಂಡವನ್ನು ಸೋಲಿಸಿ ಪ್ರಥಮ ವರ್ಷದ ಕಪ್ ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನ ಪಡೆದ ವಿರಾಟ್ ತಂಡ ರೂ. ೫೦ ಸಾವಿರ ನಗದು ಮತ್ತು ಟ್ರೋಫಿಗೆ ತೃಪ್ತಿಪಡಬೇಕಾಯಿತು.

ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಸೋಮವಾರಪೇಟೆಯ ಎಬಿಡಿ ತಂಡ ಸಕಲೇಶಪುರದ ಲಿಖಿತ್ ಫ್ರೆಂಡ್ಸ್ ತಂಡವನ್ನು ಸೋಲಿಸಿ ರೂ. ೨೫ ಸಾವಿರ ನಗದು ಪಡೆದುಕೊಂಡಿತು. ಎರಡು ದಿನಗಳ ಕಾಲ ಜರುಗಿದ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧೆಡೆಗಳಿಂದ ೧೬ ತಂಡಗಳು ಪಾಲ್ಗೊಂಡಿದ್ದವು.

ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ಉದ್ಯಮಿಗಳಾದ ಅಶ್ರಫ್, ಸುಜಿತ್, ಹಿರಿಯ ವಕೀಲ ಬಿ.ಈ. ಜಯೇಂದ್ರ, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಗಂಗಾಧರ್, ಅಪ್ಪು ಅಭಿಮಾನಿಗಳ ಬಳದ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸಹಕಾರ್ಯದರ್ಶಿ ರಾಘವೇಂದ್ರ, ಸುಂದರ್ ಮಾಸ್ಟರ್ ಮತ್ತಿತರರು ಇದ್ದರು. ಅಧ್ಯಕ್ಷತೆಯನ್ನು ಅಪ್ಪು ಅಭಿಮಾನಿ ಬಳಗದ ಅಧ್ಯಕ್ಷ ರಾಜಶೇಖರ್ ವಹಿಸಿದ್ದರು. ಗೋಣಿಕೊಪ್ಪದ ವಿನೋದ್ ಕಾರ್ಯಕ್ರಮವನ್ನು ನಿರೂಪಿಸಿದರು.

ವೈಯಕ್ತಿಕ ಬಹುಮಾನಗಳು: ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದ ಟೀಮ್ ವಿರಾಟ್ ತಂಡದ ಉತ್ತಪ್ಪ ಅವರಿಗೆ ಎಲ್‌ಇಡಿ ಟಿವಿಯನ್ನು ನೀಡಲಾಯಿತು. ಉತ್ತಮ ಬ್ಯಾಟ್ಸ್ಮನ್ ಮತ್ತು ಫೈನಲ್ ಪಂದ್ಯಾಟದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಜಿ ಫ್ರೆಂಡ್ಸ್ ತಂಡದ ರಿಯಾಜ್ ಪಡೆದುಕೊಂಡರು. ಉತ್ತಮ ವಿಕೆಟ್ ಕೀಪರ್ ಆಗಿ ಟೀಮ್ ವಿರಾಟ್ ತಂಡದ ಪ್ರಮೀತ್, ಉತ್ತಮ ಬೌಲರ್ ಆಗಿ ಸಜಿ ತಂಡದ ರೇಣು, ಉತ್ತಮ ಫೀಲ್ಡರ್ ಆಗಿ ಟೀಮ್ ವಿರಾಟ್ ತಂಡ ಶಾ ಅವರುಗಳಿಗೆ ಸ್ಮಾರ್ಟ್ ವಾಚ್‌ಗಳನ್ನು ನೀಡಲಾಯಿತು.