ವರದಿ: ಉಷಾಪ್ರೀತಮ್

ವೀರಾಜಪೇಟೆ, ಜೂ. ೯: ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಮೇ ೨೬ ರಂದು ೧೧ ಗÀಂಟೆಗೆ ನಡೆಯಬೇಕಾಗಿತ್ತು. ಆದರೆ ಬಿಜೆಪಿ ಪಕ್ಷದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಒಳಜಗಳಗಳು ಅಧಿಕವಾಗಿ ಅಭ್ಯರ್ಥಿ ಯಾರೆಂದು ತೀರ್ಮಾನಿಸಲು ಸಾಧ್ಯವಾಗದೆ ಎಲ್ಲರೂ ಒಟ್ಟಾಗಿ ಸಭೆಗೆ ಗೈರಾಗಿದ್ದರು.

ಇತ್ತ ವಿರೋಧ ಪಕ್ಷದ ಸದಸ್ಯರೆಲ್ಲರೂ ಒಂದಾಗಿ ಸ್ಥಾಯಿ ಸಮಿತಿ ಚುನಾವಣೆ ಎದುರಿಸಲು ಸಜ್ಜಾಗಿದ್ದರು. ಸಭೆ ಆರಂಭ ಮಾಡಲು ಮುಖ್ಯಾಧಿಕಾರಿಯವರಿಗೆ ಅನೇಕ ಬಾರಿ ಕೇಳಿಕೊಂಡರು. ಆದರೂ ಮುಖ್ಯಾಧಿಕಾರಿ, ಸಭೆ ಇನ್ನೂ ಆರಂಭವಾಗಿಲ್ಲ ಎಂದು ವಿರೋಧ ಪಕ್ಷದವರಿಗೆ ಸಮಾಧಾನ ಮಾಡುವ ಪ್ರಕ್ರಿಯೆ ಮುಂದುವರೆಸಿದ್ದರು.

ಕೊನೆಗೆ ವಿರೋಧ ಪಕ್ಷದ ಸದಸ್ಯರುಗಳು ಮುನ್ಸಿಪಲ್ ಕೌನ್ಸಿಲ್ ಕಾಯ್ದೆಯ ಸೆಕ್ಷನ್ ೫೧(೨) ರನ್ವಯ ತಮ್ಮಲ್ಲೇ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡು ಆ ಮೂಲಕ ಸಭೆ ನಡೆಸಲು ಮುಂದಾದಾಗ ಮುಖ್ಯಾಧಿಕಾರಿಗೆ ಸಿಬ್ಬಂದಿಯೋರ್ವರು ಸಭೆಗೆ ತಂದುಕೊಟ್ಟ ಪತ್ರವೊಂದನ್ನು ಓದುತ್ತಾ, ಅಧ್ಯಕ್ಷೆ ಸುಶ್ಮಿತಾ ಅವರಿಗೆ ಬೆಂಗಳೂರಿನಲ್ಲಿ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಬೇಕಾಗಿರುವ ಕಾರಣ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.

ಇದರಿಂದ ತೀವ್ರ ಅಸಮಾಧಾನಕ್ಕೊಳಗಾದ ವಿರೋಧ ಪಕ್ಷದ ಸದಸ್ಯರು ಮುಖ್ಯಾಧಿಕಾರಿಯವರ ವಿರುದ್ಧ ಧಿಕ್ಕಾರ ಕೂಗಿದರು.

ಈ ಬಳಿಕ ಆಡಳಿತ ಪಕ್ಷದವರ ಆಡಳಿತ ವೈಫಲ್ಯ ಜೊತೆಗೆ ಮುಖ್ಯಾಧಿಕಾರಿಯವರ ನಿರ್ಧಾರವನ್ನು ಖಂಡಿಸಿ ನಗರ ಕಾಂಗ್ರೆಸ್ ವತಿಯಿಂದ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ಹಮ್ಮಿಕೊಂಡು ಮುಖ್ಯಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು.

ಅಂದು ಮುಂದೂಡಿದ ಸಭೆಯನ್ನು ಇಂದು ಹನ್ನೊಂದು ಗÀಂಟೆಗೆ ಪ.ಪಂ. ಕಚೇರಿಯಲ್ಲಿ ಪ.ಪಂ. ಅಧ್ಯಕ್ಷೆ ಸುಶ್ಮಿತಾ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.ಸಭೆಯ ಮೊದಲಿಗೆ ಪ.ಪಂ. ಸದಸ್ಯರಾದ ಸಿ.ಕೆ. ಪೃಥ್ವಿನಾಥ್ ಅವರು ಮಾತನಾಡಿ, ಸಭೆಗೆ ಹಿಂದಿನ ಸಭೆಯ ಅಜೆಂಡಾವನ್ನು ಕೊಟ್ಟಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ.ಪಂ. ಸದಸ್ಯೆ ಜೂನಾ ಅವರು ‘‘ಸಭೆ ನಡೆಸೋದಾದರೆ ನಡೆಸಿ ಇಲ್ಲಾಂದ್ರೆ ಎದ್ದು ಹೋಗಿ’’ ಎಂದು ತಾಕೀತು ಮಾಡಿದರು. ಇವರ ಮಾತಿನಿಂದ ತೀವ್ರವಾಗಿ ಕೆರಳಿದ ಹಿರಿಯ ಸದಸ್ಯ ಪೃಥ್ವಿನಾಥ್ ಗಾಜಿನ ಲೋಟವನ್ನು ಒಡೆದು ಹಾಕಿ ತಮ್ಮ ಅಸಮಾಧಾನ ತೋರ್ಪಡಿಸಿದರು. ಇದರಿಂದ ವಿಚಲಿತರಾದ ಸದಸ್ಯೆ ಜೂನಾ ಯಾವುದೋ ಫೋನ್ ಕರೆ ಸ್ವೀಕರಿಸಲು ಹೊರನಡೆದಾಗ ವಿರೋಧ ಪಕ್ಷದ ಸದಸ್ಯರು ಶೇಮ್ ಶೇಮ್ ಎಂದು ಕೂಗಿದ ಪ್ರಸಂಗವೂ ನಡೆಯಿತು. ಬಳಿಕ ಸದಸ್ಯೆ ಜೂನಾರವರ ಮಾತಿನಿಂದ ಕುಪಿತರಾಗಿದ್ದ ವಿರೋಧ ಪಕ್ಷದ ಸದಸ್ಯರು ಸದಸ್ಯೆಯ ವಿರುದ್ಧ ಖಂಡನಾ ನಿರ್ಣಯವನ್ನು ಮಂಡಿಸಿದರು. ಆದರೆ ಮುಖ್ಯಾಧಿಕಾರಿ ಖಂಡನಾ ನಿರ್ಣಯ ಬರೆಯುವುದು ಬೇಡ ಎಂದು ತಿಳಿಸಿದರು.

ನಂತರ ಸದಸ್ಯರಾದ ರಾಜೇಶ್ ಮಾತನಾಡಲು ಹೋದಾಗ ಆಡಳಿತ ಪಕ್ಷದ ಸದಸ್ಯರು ಕಾರ್ಯಸೂಚಿ ಪ್ರಕಾರ ಸಭೆ ನಡೆಯಲಿ, ಯಾರು ಮಾತನಾಡುವುದು ಬೇಡ ಎಂದು ಗಲಾಟೆ ಎಬ್ಬಿಸಿದರು. ನಾಮ ನಿರ್ದೇಶಿತ ಸದಸ್ಯೆ ತಸ್ಲಿನಾ ಅಖ್ತರ್, ಅಧ್ಯಕ್ಷೆ ಬಳಿ ಬಂದು ಇದು ಮೀನು ಮಾರುಕಟ್ಟೆಯಲ್ಲ, ನೀವು ಸಭೆಯನ್ನು ನಿಯಂತ್ರಣ ಮಾಡಿ, ನಿಮಗೆ ಅಧಿಕಾರ ಇದೆ ಎಂದು ಕಿವಿಮಾತು ಹೇಳಿದರು. ನಂತರ ಸರತಿ ಸಾಲಿನಲ್ಲಿ ಅಧ್ಯಕ್ಷೆಗೆ ಕಿವಿಮಾತು ಹೇಳುವ ಪೆರೇಡ್ ನಡೆಯಿತು.

ಬಳಿಕ ಇದರಿಂದ ಕುಪಿತರಾದ ವಿರೋಧ ಪಕ್ಷದ ಸದಸ್ಯರು, ಅಧ್ಯಕ್ಷೆಗೆ ಹೇಳಿಕೊಡಲು ಇವರು ಯಾರು? ಸರ್ವಾಧಿಕಾರ ನಡೆಯುವುದಿಲ್ಲ, ಏಕಚಕ್ರಾಧಿಪತ್ಯ ನಡೆಸಲು ಇಲ್ಲಿ ಸಾಧ್ಯವಿಲ್ಲ ಎಂದರು.

ಸದಸ್ಯರಾದ ರಾಫಿ ಕಾನೂನು ಪ್ರಕಾರ ಸಭೆ ನಡೆಸಿ ಎಂದರು.

ಈಗ ನಡೆಯುತ್ತಿರುವ ಸಭೆ ಅಂದು ಮುಂದೂಡಿದ ಸಭೆಯಾದ್ದರಿಂದ ಹಿಂದಿನ ಕಾರ್ಯಸೂಚಿಯೇ ಇಲ್ಲಿ ಚರ್ಚೆ ಆಗಬೇಕು. ಆದರೆ ಆಡಳಿತ ಪಕ್ಷದವರು ಹೊಸ ಕಾರ್ಯಸೂಚಿಯನ್ನು ಈಗ ಕೊಟ್ಟಿದ್ದಾರೆ. ಅದು ಅವರಿಗೆ ಅನುಕೂಲವಾಗಲಿಕ್ಕೆ ಎಂದು ವಿರೋಧ ಪಕ್ಷ ದೂರಿದರೆ, ಆಡಳಿತ ಪಕ್ಷದವರದ್ದು ಈಗಿರುವ ಕಾರ್ಯಸೂಚಿಯ ಪ್ರಕಾರ ಸಭೆ ನಡೆಸಬೇಕು ಎನ್ನುವ ಬಿಗಿ ಪಟ್ಟಾಗಿತ್ತು.

ಹಿಂದಿನ ಕಾರ್ಯಸೂಚಿಯಲ್ಲಿ ಸ್ಥಾಯಿ ಸಮಿತಿ ಚುನಾವಣೆ ಕಾರ್ಯಸೂಚಿ ಒಂದರಲ್ಲಿ ಇತ್ತು. ಈಗ ಹೊಸದಾಗಿ ನೀಡಿರುವ ಕಾರ್ಯಸೂಚಿಯಲ್ಲಿ ಕೊನೆಯ ವಿಚಾರವಾಗಿ ಅದನ್ನು ಇಡಲಾಗಿದೆ. ಎಲ್ಲಾ ವಿಚಾರಗಳ ಚರ್ಚೆ ಮುಗಿದ ಬಳಿಕ ಕೊನೆಯ ವಿಚಾರ ಬಂದಾಗ ಅಂದರೆ ಸ್ಥಾಯಿ ಸಮಿತಿ ಚುನಾವಣೆ ವಿಷಯ ಬಂದಾಗ ಸಭೆಯಿಂದ ಹೊರನಡೆಯುವುದು ಆಡಳಿತ ಪಕ್ಷದವರ ತಂತ್ರ ಎನ್ನುವುದು ವಿರೋಧ ಪಕ್ಷದವರ ಆರೋಪವಾಗಿತ್ತು. ಆದರೆ ಆಡಳಿತ ಪಕ್ಷದವರು ಇದಾವುದಕ್ಕೂ ಉತ್ತರಿಸದೆ ಸಭೆ ನಡೆಸಿ, ಕಾರ್ಯಸೂಚಿ ಪ್ರಕಾರ ಇದೊಂದೇ ವಾಕ್ಯಕ್ಕೆ ಅಂಟಿಕೊAಡಿದ್ದರು.

ವಾದ-ವಿವಾದಗಳು ಹೆಚ್ಚಿದ ಹಿನ್ನೆಲೆ ಸಭೆಯನ್ನು ಮುಖ್ಯಾಧಿಕಾರಿ ಹತ್ತು ನಿಮಿಷ ಮುಂದೂಡಿದರು.

ಸಭೆಯು ಪುನಃ ಆರಂಭವಾದಾಗ ಪ.ಪಂ ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಸಭೆಯಲ್ಲಿ ಎಲ್ಲರೂ ಸಭಾ ಗೌರವವನ್ನು ಕಾಪಾಡಿಕೊಂಡು ನಗರದ ಅಭಿವೃದ್ಧಿಯ ಬಗ್ಗೆ ಚರ್ಚಿಸೋಣ ಎಂದು ಆಂಗ್ಲಭಾಷೆಯಲ್ಲಿ ವಿನಂತಿ ಮಾಡಿಕೊಂಡರು.

ಬಳಿಕ ಅಧ್ಯಕ್ಷೆ ಸುಶ್ಮಿತಾ ಮಾತನಾಡಿ, ಒಂದು ಗÀಂಟೆ ಕಾಲ ವಿರೋಧ ಪಕ್ಷವಾದ ನಿಮಗೆ ಮಾತನಾಡಲು ಸಮಯ ಕೊಟ್ಟಿದ್ದೇವೆ. ಈಗ ಕಾರ್ಯಸೂಚಿಯ ಪ್ರಕಾರ ಸಭೆ ನಡೆಯಬೇಕು ಎಂದರು. ಪ.ಪಂ. ಸದಸ್ಯ ರಾಜೇಶ್ ಪದ್ಮನಾಭ ಮಾತನಾಡಿ, ಹಿಂದಿನ ಸಭೆ ಕರೆದು ನೀವು ಸಭೆಗೆ ಗೈರಾಗಿದ್ದಿರಿ, ಈಗ ಸಭೆ ಕರೆದು ಕಾನೂನಿಗೆ ವಿರೋಧವಾಗಿ ನಿಮಗೆ ಅನುಕೂಲವಾಗುವ ಹಾಗೆ ಹೊಸ ಕಾರ್ಯಸೂಚಿ ಮಾಡಿಕೊಂಡು ಬಂದು ಅದರಲ್ಲಿ ಸ್ಥಾಯಿ ಸಮಿತಿ ಚುನಾವಣೆಯನ್ನು ಕೊನೆಯ ವಿಚಾರವಾಗಿ ಸೇರಿಸಿದ್ದೀರಿ. ನೀವು ಮಾಧ್ಯಮದ ಮುಂದೆ ಈಗ ಒಂದು ಮಾತನ್ನು ಹೇಳಬೇಕು, ಅದೇನೆಂದರೆ ಕಾರ್ಯಸೂಚಿಯಲ್ಲಿರುವ ಎಲ್ಲಾ ವಿಚಾರಗಳು ಚರ್ಚೆಯಾದ ಬಳಿಕ ಸ್ಥಾಯಿ ಸಮಿತಿ ಚುನಾವಣೆ ನಡೆಯುವ ತನಕ ನೀವೆಲ್ಲರೂ ಇಲ್ಲಿ ಹಾಜರಿರಬೇಕು ಎಂದು ಒಪ್ಪಿಕೊಳ್ಳಿ ಎನ್ನುವ ಸವಾಲು ಹಾಕಿದರು. ಅದಕ್ಕೆ ಅಧ್ಯಕ್ಷೆ ಒಪ್ಪಿಗೆ ಸೂಚಿಸಿದರು.

ನಂತರ ಪ.ಪಂ. ಸದಸ್ಯರಾದ ಮೊಹಮ್ಮದ್ ರಾಫಿಯವರು ಮಾತನಾಡಲು ಆರಂಭಿಸಿದಾಗ ಪುನಃ ಸಭೆಯಲ್ಲಿ ಗೊಂದಲ ಏರ್ಪಟ್ಟಿತು. ಅಧ್ಯಕ್ಷೆ, ಮುಖ್ಯಾಧಿಕಾರಿಯವರಿಗೆ ‘‘ಪೊಲೀಸ್ ಅವರಿಗೆ ಕರೆಮಾಡಿ ಕರೆಸಿ ಎಂದರು. ಅದಕ್ಕೆ ಸದಸ್ಯರಾದ ಪೃಥ್ವಿನಾಥ್ ಇದು ಪ್ರಜಾಪ್ರಭುತ್ವದ ಕಗ್ಗೊಲೆ’’ ಎಂದರು.

ಬಳಿಕ ಅಧ್ಯಕ್ಷೆ ಸಭೆಯನ್ನು ಉದ್ದೇಶಿಸಿ ಈ ಸಭೆಯನ್ನು ನಾನು ರದ್ದು ಮಾಡುತ್ತಿದ್ದೇನೆ ಎಂದರು.

ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಪರಸ್ಪರ ಘೋಷಣೆ ಕೂಗಿಕೊಂಡು ಸಭೆಯಿಂದ ಹೊರನಡೆದರು. ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಪ್ರತ್ಯೇಕ ಸುದ್ದಿಗೋಷ್ಠಿಗಳನ್ನು ನಡೆಸಿದರು. ಇಂದಿನ ಸಭೆ ಕೂಡಾ ಬರೇ ಗೊಂದಲ, ಘರ್ಷಣೆ, ಕೂಗಾಟ, ಚೀರಾಟಕ್ಕೆ ಸೀಮಿತವಾಯಿತು.

ಸಭೆಗೆ ಚೆಸ್ಕಾಂ, ಅರಣ್ಯ ಹಲವು ಇಲಾಖೆಗಳ ಅಧಿಕಾರಿಗಳು ಆಗಮಿಸಿದ್ದರು. ಸಭೆಯಲ್ಲಿ ಉಂಟಾದ ಕೋಲಾಹಲವನ್ನು ಮೌನವಾಗಿ ವೀಕ್ಷಿಸಿ, ಸಮಯವನ್ನು ವ್ಯರ್ಥ ಮಾಡಿಕೊಂಡು ಸಭೆಯಿಂದ ಅರ್ಧಕ್ಕೆ ಹೊರಟು ಹೋದರು.

ಸಭೆಯಲ್ಲಿ ಮುಖ್ಯಾಧಿಕಾರಿ ಚಂದ್ರಕುಮಾರ್, ಅಭಿಯಂತರ ಹೇಮ್ ಕುಮಾರ್, ಪ.ಪಂ. ಸರ್ವ ಸದಸ್ಯರು, ಪ.ಪಂ. ಸಿಬ್ಬಂದಿಗಳು ಹಾಜರಿದ್ದರು.