ಮಡಿಕೇರಿ, ಜೂ.೬: ಜೇನು ಕುರುಬರು ವಾಸಿಸುವ ಹಾಡಿಗಳಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಮೂಲ ನಿವಾಸಿ ಫಲಾನುಭವಿಗಳಿಂದ ಅರ್ಜಿಗಳು ಬಂದಿದ್ದು, ಅದನ್ನು ಪರಿಶೀಲಿಸಿ ಅನುದಾನಕ್ಕೆ ತಕ್ಕಂತೆ ಕಾರ್ಯಕ್ರಮ ಕೈಗೆತ್ತಿಕೊಳ್ಳುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೂಲನಿವಾಸಿ ಜೇನುಕುರುಬ ಜನಾಂಗದವರ ಅಭಿವೃದ್ಧಿ ಯೋಜನೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಾಡಿಗಳಲ್ಲಿ ಮೂಲ ಸೌಕರ್ಯ ಒದಗಿಸಬೇಕು. ಜಲಜೀವನ ಮಿಷನ್ ಅಡಿ ಎಲ್ಲಾ ಹಾಡಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಹಾಡಿಗಳಲ್ಲಿ ಶಿಕ್ಷಣದಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು ಶಿಕ್ಷಣ ಇಲಾಖೆ ಅವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಪರಿಶಿಷ್ಟ ಪಂಗಡದ ಮೂಲ ನಿವಾಸಿ ಸಮುದಾಯಗಳ ಜೇನು ಕುರುಬ ಮತ್ತು ಕೊರಗ ಸಮುದಾಯ ದವರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿಗದಿಯಾಗಿರುವ ಕಾರ್ಯಕ್ರಮಗಳಿಗೆ ವಿವಿಧ ಉದ್ದೇಶಕ್ಕಾಗಿ ಬಂದ ಅರ್ಜಿಗಳನ್ನು ಪರಿಶೀಲಿಸಿ ಕೆಲವು ಫಲಾನುಭವಿ ಗಳನ್ನು ಆಯ್ಕೆ ಮಾಡಲಾ ಯಿತು. ಉಳಿದ ಫಲಾನುಭವಿಗಳನ್ನು ಅವರ ದಾಖಲಾತಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಸಭೆಯಲ್ಲಿ ಮೂಲ ನಿವಾಸಿಗಳ ವಿವಿಧ ಸೌಲಭ್ಯಗಳಾದ ರ‍್ಯಾಪ್ಟಿಂಗ್ ಬೋಟ್ ಮತ್ತು ಸಲಕರಣೆ ವಿತರಣೆ, ಅಂಗಡಿ ವ್ಯಾಪಾರ, ಕೃಷಿ ಉದ್ದೇಶಕ್ಕಾಗಿ ಡೀಸೆಲ್, ಮೋಟಾರು ಮತ್ತು ಪೈಪುಗಳ ಸರಬರಾಜು, ಪಂಪ್‌ಸೆಟ್, ಕುರಿ ಸಾಕಾಣಿಕೆ, ತಂತಿ ಬೇಲಿ, ಹಂದಿ ಸಾಕಾಣಿಕೆ, ಹಸು ಸಾಕಾಣಿಕೆ, ಸರಕು ವಾಹನ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಹೊನ್ನೇಗೌಡ ಮಾತನಾಡಿ, ಕುರಿ ಸಾಕಾಣಿಕೆಗಾಗಿ ೩೪ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ೧೩ ಜನರು ಪೂರ್ಣ ದಾಖಲಾತಿ ನೀಡಿದ್ದು, ಉಳಿದ ೨೭ ಮಂದಿ ಯಾವುದೇ ದಾಖಲಾತಿ ನೀಡಿರುವುದಿಲ್ಲ. ತಂತಿ ಬೇಲಿ ನಿರ್ಮಿಸಿಕೊಡುವಂತೆ ೩೯ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ೧೭ ಮಂದಿ ಪೂರ್ಣ ದಾಖಲಾತಿ ನೀಡಿದ್ದಾರೆ. ಉಳಿದ ೨೨ ಮಂದಿ ಪೂರ್ಣ ಮಾಹಿತಿ ನೀಡಿರುವುದಿಲ್ಲ ಎಂದರು.
ಹAದಿ ಸಾಕಾಣಿಕೆಯ ಉದ್ದೇಶಕ್ಕಾಗಿ ೪೬ ಮಂದಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ೨೭ ಮಂದಿ ಪೂರ್ಣ ಮಾಹಿತಿ ನೀಡಿದ್ದಾರೆ. ಹಸು ಸಾಕಾಣಿಕೆ ಉದ್ದೇಶಕ್ಕಾಗಿ ೩೦ ಮಂದಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ೧೫ ಮಂದಿ ಪೂರ್ಣ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ಸೋಮವಾರಪೇಟೆ ಸಮಿತಿ ಸದಸ್ಯ ಚಂದ್ರು ಮಾತನಾಡಿ, ಹಾಡಿಗಳಲ್ಲಿ ಅಕ್ರಮವಾಗಿ ಮಾರಾಟ ವಾಗುವ ಮದ್ಯದ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದರು. ಸೋಮವಾರಪೇಟೆ ಸಮಿತಿ ಸದಸ್ಯೆ ಕೀರ್ತನಾ ಮಾತನಾಡಿ ಜೇನುಕುರುಬರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣ ಒದಗಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಸುರೇಶ್ ಭಟ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಚಂದ್ರಶೇಖರ್, ಜಿ.ಪಂ. ಇಇ ಶ್ರೀಕಂಠಯ್ಯ, ತಾಲೂಕು ಸಮಿತಿಯ ಸದಸ್ಯರು ಇತರರು ಇದ್ದರು.