*ಗೋಣಿಕೊಪ್ಪ, ಜೂ. ೨: ಟಿ.ಶೆಟ್ಟಿಗೇರಿ, ಹರಿಹರ, ಈಸ್ಟ್, ವೆಸ್ಟ್ ನಮ್ಮಲೆ ಗ್ರಾಮಗಳಿಗೆ ಒಂದು ಕೋಟಿ ಇಪ್ಪತ್ತೆಂಟು ಲಕ್ಷದ ಮೂವತ್ತಾರು ಸಾವಿರ ಜಲ್ ಜೀವನ್ ಯೋಜನೆಯ ಅನುದಾನದಲ್ಲಿ ಕುಡಿಯುವ ನೀರಿನ ಸೌಕರ್ಯ ಒದಗಿಸಲಾಗುವುದು ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.

ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲ್‌ಜೀವನ್ ಯೋಜನೆಯ ಅನುಷ್ಠಾನಕ್ಕೆ ಇಲ್ಲಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಿ ಅವರು ಮಾತನಾಡಿದರು.

ತಲಾ ೨ ಸಾವಿರ ಲೀಟರ್‌ನಂತೆ ಒಟ್ಟು ೬ ಸಾವಿರ ಲೀಟರ್ ನೀರಿನ ಟ್ಯಾಂಕನ್ನು ನಿರ್ಮಿಸಿ ೩೧೪ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು. ಇದಕ್ಕಾಗಿ ೮೫೦೦ ಮೀಟರ್ ಪೈಪ್ ಲೈನ್‌ಗಳನ್ನು ಅಳವಡಿಸಲಾಗುವುದು. ಹರಿಹರ ಗ್ರಾಮಕ್ಕೆ ೪೬.೧೩ ಲಕ್ಷ, ಟಿ.ಶೆಟ್ಟಿಗೇರಿ ಗ್ರಾಮಕ್ಕೆ ೪೨.೨೦ ಲಕ್ಷ, ವೆಸ್ಟ್, ಈಸ್ಟ್ ನೆಮ್ಮಲೆ ಗ್ರಾಮಗಳಿಗೆ ೪೦.೦೩ಲಕ್ಷ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ ಎಂದು ಹೇಳಿದರು. ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಕುಂಞAಗಡ ಅರುಣ್‌ಭೀಮಯ್ಯ, ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ, ಟಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷೆ ಕೆ.ಜಿ. ದೇವಮ್ಮಾಜಿ, ತಾಲೂಕು ಬಿಜೆಪಿ ಉಪಾಧ್ಯಕ್ಷ ಮಚ್ಚಮಾಡ ಸುಮನ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕವಿತಾ ಹಾಗೂ ಗ್ರಾ.ಪಂ. ಸದಸ್ಯರುಗಳಾದ ಕೆ.ಪಿ.ಪ್ರಭು, ಎಂ.ಎA. ಪಟ್ಟು, ಮನ್ನೇರ ಅಜಿತ, ಎಂ.ಡಿ. ವನಿತಾ, ಹೇಮಾವತಿ, ಸರಿತಾ, ಸಿ.ಜೆ. ರಂಜಿ, ಜಿ.ಪಂ. ಇಂಜಿನಿಯರ್ ಮಹಾದೇವ್, ಜಲ್‌ಜೀವನ್ ಯೋಜನೆ ಇಂಜಿನಿಯರ್ ಯೋಗೇಶ್ ಗೌಡ, ಸಹಾಯಕ ಇಂಜಿನಿಯರ್ ಸುನಿಲ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಗಡ ಮಧು ದೇವಯ್ಯ ಇದ್ದರು.