ಸೋಮವಾರಪೇಟೆ, ಜೂ. ೨: ಸರ್ಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಭ್ರಷ್ಟಾಚಾರ ನಿಗ್ರಹದಳ ಡಿವೈಎಸ್ಪಿ ಕೆ.ರಾಜೇಂದ್ರ ಮನವಿ ಮಾಡಿದರು.
ಪತ್ರಿಕಾಭವನದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಯಾವುದೇ ಸರ್ಕಾರಿ ನೌಕರ ತನ್ನ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ಅನಗತ್ಯ ವಿಳಂಬ ಮಾಡಿದ್ದಲ್ಲಿ, ನಿರ್ಲಕ್ಷö್ಯತೆ ತೋರಿದಲ್ಲಿ ಅಥವಾ ಲಂಚ ಕೇಳಿದಲ್ಲಿ ಕೂಡಲೇ ಎಸಿಬಿಯನ್ನು ಸಂಪರ್ಕಿಸಬೇಕು. ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.
ಲಂಚ ಪಡೆದು ಬಚಾವಾಗಬಹುದು ಎಂಬ ಭ್ರಮೆಯಲ್ಲಿ ಲಂಚಕೋರರು ಇರಬಹುದು. ಸಿಕ್ಕಿಬಿದ್ದ ಮೇಲೆ ತಿಂಗಳುಗಟ್ಟಲೆ ನ್ಯಾಯಾಂಗ ಬಂಧನದಲ್ಲಿ ಇರಬೇಕಾಗುತ್ತದೆ. ಕುಶಾಲನಗರ ಕಂದಾಯ ಇಲಾಖೆಯ ನೌಕರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದ, ನಂತರ ಸುಪ್ರಿಂಕೋರ್ಟ್ನಲ್ಲಿ ಜಾಮೀನು ಪಡೆದಿದ್ದಾನೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕೆಲ ಸರ್ಕಾರಿ ನೌಕರರು ಬ್ರೋಕರ್ಗಳ ಮೂಲಕ ಲಂಚ ಪಡೆಯುತ್ತಿದ್ದಾರೆ. ಸಾರ್ವಜನಿಕರು ಏನು ಮಾಡಬೇಕು ಎಂದು ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಜಿ.ಸುರೇಶ್ ಕೇಳಿದರು. ಲಂಚ ಪಡೆದ ಸರ್ಕಾರಿ ನೌಕರರೊಂದಿಗೆ, ಬ್ರೋಕರ್ನನ್ನು ಬಂಧಿಸಿ, ಮೊಕದ್ದಮೆ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ. ಅನೇಕ ಪ್ರಕರಣಗಳಲ್ಲಿ ಬ್ರೋಕರ್ಗಳನ್ನು ಬಂಧಿಸಿದ್ದೇವೆ ಎಂದು ಡಿವೈಎಸ್ಪಿ ಹೇಳಿದರು.
ಮಡಿಕೇರಿ ಎಸಿಬಿ ಕಚೇರಿ ದೂ. ಸಂಖ್ಯೆ ೦೮೨೭೨-೨೨೨೧೦೦, ೯೪೮೦೮೦೬೨೨೫, ೯೪೮೦೮೦೬೨೮೧, ೯೪೮೦೮೦೬೨೮೨ ಅನ್ನು ಸಾರ್ವಜನಿಕರು ಸಂಪರ್ಕಿಸಿ ಮುಕ್ತವಾಗಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು. ಇನ್ಸ್ಪೆಕ್ಟರ್ ಎನ್.ಪಿ.ಹರೀಶ್ ಇದ್ದರು.