ಪೊನ್ನಂಪೇಟೆ, ಜೂ. ೨: ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಆಯೋಜಿಸಲು ಉದ್ದೇಶಿಸಿ ಮಳೆಯ ಕಾರಣದಿಂದ ಮುಂದೂಡಲ್ಪಟ್ಟಿದ್ದ ತೆಂಗಿನಕಾಯಿಗೆ ಗುಂಡು ಹೊಡೆಯುವ ಮುಕ್ತ ಸ್ಪರ್ಧೆ "ನಿಸರ್ಗ ಜೆಸಿಐ ಶೂಟಿಂಗ್ ಫೆಸ್ಟ್-೨೦೨೨" ತಾ. ೫ರಂದು ಬಾಳುಗೋಡಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದ ಮೈದಾನದಲ್ಲಿ ಪುನರ್ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಎ.ಪಿ. ದಿನೇಶ್ ತಿಳಿಸಿದ್ದಾರೆ.
ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ದೇಶಿತ ನಿಸರ್ಗ ಜೆಸಿಐ ಶೂಟಿಂಗ್ ಫೆಸ್ಟ್ನಲ್ಲಿ ಸ್ಪರ್ಧೆಗಳನ್ನು ೩ ವಿಭಾಗಗಳಾಗಿ ವಿಂಗಡಿಸಲಾಗಿದ್ದು, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ೦.೨೨ ರೈಫಲ್ ಶೂಟಿಂಗ್, ೧೨ನೇ ಬೋರಿನ ಗನ್ ಶೂಟಿಂಗ್ ಹಾಗೂ ಏರ್ ಗನ್ ಮೂಲಕ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಎಲ್ಲಾ ಸ್ಪರ್ಧೆಗಳಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ತಲಾ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದ ಆಕರ್ಷಕ ನಗದು ಬಹುಮಾನ ಮತ್ತು ಟ್ರೋಫಿಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
೦.೨೨ ರೈಫಲ್ ಶೂಟಿಂಗ್‌ನಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಕ್ರಮವಾಗಿ ರೂ. ೨೫ ಸಾವಿರ, ೨೦ಸಾವಿರ, ೧೫ಸಾವಿರ, ೧೨ನೇ ಬೋರಿನ ಗನ್ ಶೂಟಿಂಗ್ ಸ್ಪರ್ಧೆಯಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಕ್ರಮವಾಗಿ ರೂ.೨೦ ಸಾವಿರ, ೧೫ಸಾವಿರ,೧೦ ಸಾವಿರ ಹಾಗೂ ಏರ್ ಗನ್ ಮೂಲಕ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಕ್ರಮವಾಗಿ ರೂ. ೫ ಸಾವಿರ, ೪ಸಾವಿರ, ೩ಸಾವಿರ ನಗದು ಬಹುಮಾನವನ್ನು ವಿತರಿಸಲಾಗುವುದು ಎಂದು ದಿನೇಶ್ ತಿಳಿಸಿದ್ದಾರೆ.
ಸ್ಪರ್ಧೆಯ ಎಲ್ಲಾ ಮೂರು ವಿಭಾಗಗಳಲ್ಲಿ ಪಾಲ್ಗೊಂಡು ಅತಿಹೆಚ್ಚು ಸುತ್ತುಗಳಿಗೆ ಪ್ರವೇಶ ಪಡೆದು ಗಮನ ಸೆಳೆಯುವ ಅತಿ ಕಿರಿಯ ವಯಸ್ಸಿನ ಶೂಟರ್ಸ್ಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ತಿಳಿಸಿರುವ ದಿನೇಶ್ ಅವರು, ಕಾರ್ಯಕ್ರಮದಂದು ಬೆಳಿಗ್ಗೆ ೯ ಗಂಟೆಯಿAದಲೇ ಸ್ಥಳದಲ್ಲೇ ಹೆಸರು ನೋಂದಣಿಗೆ ಅವಕಾಶವಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳಾದ ೯೧೪೮೯೭೮೯೧೯, ೯೯೭೨೫೩೮೦೩೦ ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಸ್ಪರ್ಧೆಯ ಯೋಜನಾ ನಿರ್ದೇಶಕರಾದ ಎ. ಎಸ್. ಟಾಟು ಮೊಣ್ಣಪ್ಪ, ಸಂಸ್ಥೆಯ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಕೋಶಾಧಿಕಾರಿ ಕುಪ್ಪಂಡ ದಿಲನ್ ಬೋಪಣ್ಣ ಉಪಸ್ಥಿತರಿದ್ದರು.