ಶನಿವಾರಸಂತೆ, ಜೂ. ೨: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮ ಗ್ರಾಮದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಕಾಗದ, ಪ್ಲಾಸ್ಟಿಕ್, ಇತ್ಯಾದಿ ಹಗುರ ಕಸ ಗಾಳಿಗೆ ಹಾರಿ ಮನೆಗಳ ಮುಂದೆ ಅಂಗಳಕ್ಕೆ ರಸ್ತೆ ಬದಿಯಲ್ಲಿ ಎಲ್ಲೆಡೆ ಹರಡಿಕೊಂಡಿದೆ ಎಂದು ಗ್ರಾಮಸ್ಥರಾದ ಶಾಕೀಬ್ ಹಸೇನ್, ಗಿರಿ, ಕುಮಾರ ಹಾಗೂ ತೌಸೀಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಅವರು, ತ್ಯಾಜ್ಯ ವಸ್ತುಗಳ ಜತೆ ಮಳೆಯ ನೀರು ನಿಂತು ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಕಸ ಕೊಳೆತು ದುರ್ವಾಸನೆ ಹರಡುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಗ್ರಾಮಸ್ಥರಲ್ಲಿ ಮೂಡಿದೆ. ಗ್ರಾಮ ಪಂಚಾಯಿತಿ ಯಿಂದ ನಿಯೋಜಿಸಲ್ಪಟ್ಟ ಕಸ ವಿಲೇವಾರಿ ಆಟೋಗಳು ಸಮರ್ಪಕ ವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಪಂಚಾಯಿತಿಗೆ, ವಾರ್ಡ್ ಸದಸ್ಯರಿಗೆ, ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸ್ಥಳ ಪರಿಶೀಲನೆ ಮಾಡಿದ ಪಿಡಿಓ ಸಹ ಸ್ಪಂದಿಸಲಿಲ್ಲ. ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳು ಹಾಗೂ ಚುನಾಯಿತ ಪಂಚಾಯಿತಿ ಸದಸ್ಯರು ಎಚ್ಚೆತ್ತು ಶೀಘ್ರ ಕಸ ವಿಲೇವಾರಿ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಗ್ರಾಮ ನೈರ್ಮಲ್ಯ ಮತ್ತು ಸೌಂದರ್ಯ ಕಾಪಾಡುವ ಮೂಲಕ ಆರೋಗ್ಯಕರ ವಾತಾವರಣ ಮೂಡಿಸಲು ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.