ಮಡಿಕೇರಿ, ಜೂ.೨: ಪಠ್ಯ ಪುಸ್ತಕ ಪರಿಷ್ಕರಣೆ ಎನ್ನುವ ನಾಟಕವಾಡುತ್ತಿರುವ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ತನ್ನ ಅಜೆಂಡಾವನ್ನು ವಿದ್ಯಾರ್ಥಿಗಳ ಮೇಲೂ ಹೇರುವ ಪ್ರಯತ್ನದಲ್ಲಿ ತೊಡಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತಿಹಾಸವನ್ನು ತಿರುಚುವ ಪಠ್ಯ ಪುಸ್ತಕ ಪರಿಷ್ಕರಣೆಯ ನಾಟಕವನ್ನು ಸರಕಾರ ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ದೇಶದ ಭವ್ಯ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆ ಹೊತ್ತಿರುವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸುತ್ತಿರುವ ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸಲು ಹೊರಟಿದೆ ಎಂದು ಟೀಕಿಸಿದ್ದಾರೆ.

ಮಠಾಧೀಶರು ಹಾಗೂ ಹಿರಿಯ ಸಾಹಿತಿಗಳು ಪ್ರತಿಭಟನಾ ರೂಪದಲ್ಲಿ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರೂ ಸರಕಾರ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಜೊತೆ ಚೆಲ್ಲಾಟವಾಡಬಾರದು.

ಶಿಕ್ಷಣ ಕ್ಷೇತ್ರವನ್ನು ನಿತ್ಯ ಗೊಂದಲಕ್ಕೀಡು ಮಾಡಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮನಸ್ಸಿಗೆ ನೋವುಂಟು ಮಾಡಲಾಗುತ್ತಿದೆ ಎಂದು ಟೀಕಿಸಿರುವ ಅವರು, ತಕ್ಷಣ ಸರಕಾರ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರನ್ನು ವಜಾಗೊಳಿಸಿ ಹಳೆಯ ಪಠ್ಯಕ್ರಮವನ್ನೇ ಮುಂದುವರೆಸಬೇಕೆAದು ಒತ್ತಾಯಿಸಿದ್ದಾರೆ.