ಸೋಮವಾರಪೇಟೆ, ಮೇ ೨೮: ಕಂದಾಯ ಇಲಾಖೆ ವತಿಯಿಂದ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾರ್ವಜನಿಕರು, ತಾಲೂಕು ತಹಶೀಲ್ದಾರ್ ಎದುರು ತಮ್ಮ ಸಮಸ್ಯೆಗಳನ್ನು ತೆರೆದಿಟ್ಟರು.

ತೋಳೂರುಶೆಟ್ಟಳ್ಳಿಯಲ್ಲಿರುವ ಚೌಡ್ಲು ವಿಎಸ್‌ಎಸ್‌ಎನ್ ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ತಾಲೂಕು ತಹಶೀಲ್ದಾರ್ ಗೋವಿಂದರಾಜ್ ವಹಿಸಿದ್ದರು.

ರೈತ ಸಂಘದ ತಾಲೂಕು ಅಧ್ಯಕ್ಷ, ಕೂತಿ ಗ್ರಾಮದ ದಿನೇಶ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ರೈತರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಭೂಮಿ ದಾಖಲಾತಿಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ. ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಗೋವಿಂದರಾಜು, ತಾಲೂಕು ಆಡಳಿತವನ್ನು ಸುಧಾರಿಸ ಲಾಗಿದೆ. ಭ್ರಷ್ಟಾಚಾರದ ಬಗ್ಗೆ ವೃಥಾ ಆರೋಪ ಮಾಡುವುದು ಸರಿಯಲ್ಲ; ಅಂತಹ ಪ್ರಕರಣಗಳಿದ್ದರೆ ಲಿಖಿತ ವಾಗಿ ದೂರು ನೀಡಿ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಅದನ್ನು ಬಿಟ್ಟು ಸಭೆಯಲ್ಲಿ ಸುಖಾಸುಮ್ಮನೆ ಆರೋಪಿಸುವುದು ಬೇಡ ಎಂದರು.

ಕೂತಿ ಗ್ರಾಮದ ಸುಶೀಲಾ ಕಾರ್ಯಪ್ಪ ಮಾತನಾಡಿ, ತೋಳೂರು ಶೆಟ್ಟಳ್ಳಿ, ಕೂತಿ ಗ್ರಾಮದ ರಸ್ತೆ ಬದಿಯಲ್ಲಿ ಚರಂಡಿ ಇಲ್ಲ. ರಸ್ತೆಯಲ್ಲಿ ಹರಿದ ನೀರು ಮನೆಗಳಿಗೆ ನುಗ್ಗುತ್ತಿದೆ ಎಂದರು. ಈ ಬಗ್ಗೆ ಉತ್ತರಿಸಬೇಕಾದ ಲೋಕೋಪಯೋಗಿ ಇಲಾಖೆಯ ಅಭಿಯಂತರರು ಸಭೆಗೆ ಗೈರಾಗಿದ್ದ ರಿಂದ ಸಮಸ್ಯೆಯ ಬಗ್ಗೆ ಇಲಾಖೆಗೆ ಗಮನಕ್ಕೆ ತರಲಾಗುವುದು ಎಂದು ತಹಶಿಲ್ದಾರ್ ಹೇಳಿದರು.

ಸೋಮವಾರಪೇಟೆ-ಕೂತಿ ರಸ್ತೆಯಲ್ಲಿ ಟಿಂಬರ್ ಲೋಡ್ ಮಾಡುತ್ತಿರುವುದರಿಂದ ಇತರ ವಾಹನಗಳಿಗೆ ಸಮಸ್ಯೆಯಾಗಿದೆ ಎಂದು ದೊಡ್ಡತೋಳೂರು ಸುರೇಶ್ ಹೇಳಿದರು. ಕಂಬಳ್ಳಿಯಿAದ ತೋಳೂರುಶೆಟ್ಟಳ್ಳಿಗೆ ಬರಬೇಕಾದರೆ ೧೫ ಕಿ.ಮೀ. ಆಗುತ್ತದೆ. ಬಳಸು ದಾರಿಯಲ್ಲಿ ಬರಬೇಕಿದೆ. ಇದರಿಂದ ಗ್ರಾಮಸ್ಥರಿಗೆ ಸಮಸ್ಯೆಯಾಗಿದ್ದು, ಈಗಿರುವ ಕಚ್ಚಾ ರಸ್ತೆಯನ್ನು ದುರಸ್ತಿಪಡಿಸಿ ಸೇತುವೆ ನಿರ್ಮಿಸಿದರೆ ೨ ಕಿ.ಮೀ. ಅಂತರದಲ್ಲಿ ತೆರಳ ಬಹುದು. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕಂಬಳ್ಳಿ ಗ್ರಾಮಸ್ಥರು ಮನವಿ ಮಾಡಿದರು.

ತೋಳೂರುಶೆಟ್ಟಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶುಶ್ರೂಷಕರನ್ನು ನಿಯೋಜಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಹೇಳಿದರು. ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ಎದುರಿಸಲು ಕಂದಾಯ ಇಲಾಖೆ ಸನ್ನದ್ಧವಾಗಿದೆ. ಮಳೆಗಾಲದಲ್ಲಿ ಬರೆ ಜರಿಯುವುದು, ಭೂಕುಸಿತ, ಮರಗಳು ಬಿದ್ದು ಸಂಚಾರ ಸ್ಥಗಿತಗೊಳ್ಳುವ ಸಂದರ್ಭ ತಕ್ಷಣಕ್ಕೆ ಸ್ಪಂದಿಸಿ ತುರ್ತು ಕ್ರಮ ಕೈಗೊಳ್ಳುವ ಉದ್ದೇಶದಿಂದ ಗ್ರಾ.ಪಂ. ಮಟ್ಟದಲ್ಲಿ ಟಾಸ್ಕ್ಫೋರ್ಸ್ ಸಮಿತಿಗಳನ್ನು ರಚಿಸಲಾಗಿದೆ.

ತುರ್ತು ನಿರ್ವಹಣೆಗಾಗಿ ಜೀಪ್, ಜೆಸಿಬಿ, ಹಿಟಾಚಿ, ಕ್ರೇನ್‌ಗಳನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ತಹಶೀಲ್ದಾರ್ ಹೇಳಿದರು.

ಕೂತಿ ಗ್ರಾಮ ವ್ಯಾಪ್ತಿಯ ಹಲವಷ್ಟು ಕೃಷಿಕರಿಗೆ ಸರ್ಕಾರದ ಪರಿಹಾರ ಹಣ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ರೈತರಿಗೆ ಸಮರ್ಪಕ ಮಾಹಿತಿಗಳು ಲಭಿಸುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಪ್ರತಿ ಗ್ರಾಮ ಮಟ್ಟದಲ್ಲಿ ಗ್ರಾಮ ಒನ್ ಸ್ಥಾಪಿಸ ಲಾಗಿದ್ದು, ಸದುಪ ಯೋಗಪಡಿಸಿ ಕೊಳ್ಳಿ. ಬೆಟ್ಟದಳ್ಳಿ ಗ್ರಾಮ ವ್ಯಾಪ್ತಿಯ ಗ್ರಾಮ ಒನ್ ಕೇಂದ್ರವನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತೆರೆಯ ಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು. ಚಿಕ್ಕತೋಳೂರು ಗ್ರಾಮದ ಸೋಮಯ್ಯ ಮತ್ತು ವಿಜಯ್ ಎಂಬವರ ಮನೆಯು ೨೦೧೯ರಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ಹಾನಿಯಾಗಿದ್ದು, ಈವರೆಗೆ ಪರಿಹಾರ ಲಭಿಸಿಲ್ಲ ಎಂದು ಗ್ರಾ.ಪಂ.. ಸದಸ್ಯ ಮೋಹಿತ್ ಗಮನ ಸೆಳೆದರು. ಈ ಬಗ್ಗೆ ದಾಖಲೆಗಳನ್ನು ಸಲ್ಲಿಸಿದರೆ ಪುನರ್ ಪರಿಶೀಲಿಸಿ ಕ್ರಮ ವಹಿಸುವುದಾಗಿ ಅಧಿಕಾರಿ ಮಾಹಿತಿ ನೀಡಿದರು. ಶಾಂತಳ್ಳಿ ಹೋಬಳಿ ಕಂದಾಯ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ವಾರದ ಪ್ರತಿ ಬುಧವಾರ ಮತ್ತು ಶನಿವಾರ ತೋಳೂರು ಶೆಟ್ಟಳ್ಳಿ ಗ್ರಾ.ಪಂ. ಕಚೇರಿಯಲ್ಲಿ ಲಭ್ಯರಿರುತ್ತಾರೆ. ಸಾರ್ವಜನಿಕರು ಸಂಪರ್ಕಿಸಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬಹುದು ಎಂದು ಗೋವಿಂದರಾಜ್ ತಿಳಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ, ಗ್ರಾ.ಪಂ. ಅಧ್ಯಕ್ಷ ರುದ್ರಪ್ಪ, ಶಾಂತಳ್ಳಿ ಕಂದಾಯ ನಿರೀಕ್ಷಕ ದಾಮೋಧರ್, ಗ್ರಾಮ ಲೆಕ್ಕಾಧಿಕಾರಿ ಕರಿಬಸವರಾಜು, ಗ್ರಾ.ಪಂ. ಸದಸ್ಯರು, ತೋಟಗಾರಿಕಾ ಇಲಾಖೆ, ಪೊಲೀಸ್, ಅರಣ್ಯ ಇಲಾಖೆ, ಅಂಗನವಾಡಿ-ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.