ಸೋಮವಾರಪೇಟೆ, ಮೇ ೨೮: ಪಟ್ಟಣದ ಕಕ್ಕೆಹೊಳೆ ಜಂಕ್ಷನ್ ಸಮೀಪವಿರುವ ಶ್ರೀಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ವಿವಿಧ ಪೂಜಾ ಕೈಂಕರ್ಯ ಗಳೊಂದಿಗೆ ಸಂಪನ್ನಗೊAಡಿತು.
ಕಾಳೇಘಾಟ್ನ ತಂತ್ರಿಗಳಾದ ಬ್ರಹ್ಮಶ್ರೀ ನಾರಾಯಣನ್ ನಂಬೂದರಿ ಅವರ ನೇತೃತ್ವದಲ್ಲಿ ಗಣಪತಿ ಹೋಮದೊಂದಿಗೆ ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಿತು. ಮುತ್ತಪ್ಪಸ್ವಾಮಿ ದೇವರಿಗೆ ನೂತನವಾಗಿ ನಿರ್ಮಿಸಲಾಗಿದ್ದ ಮುಖಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕಲಶಕ್ಕೆ ಅಶ್ವಿನಿ ನಕ್ಷತ್ರದ ಎರಡನೇ ಪಾದದ ಮಿಥುನ ರಾಶಿಯಲ್ಲಿ ಅಭಿಷೇಕ ನೆರವೇರಿಸುವ ಮೂಲಕ ಪೂಜೆ ಸಲ್ಲಿಸಲಾಯಿತು.
ಅಶ್ವಿನಿ ೨ನೇ ಪಾದದ ಕರ್ಕಾಟಕ ರಾಶಿಯ ಶುಭ ಮುಹೂರ್ತದಲ್ಲಿ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀ ತಿರುವಪ್ಪನ್, ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೇವರುಗಳಾದ ಶ್ರೀಭಗವತಿ, ಶ್ರೀರಕ್ತಚಾಮುಂಡಿ, ಶ್ರೀಕಂಡಕರ್ಣನ್, ಶ್ರೀ ಕರಿಂಗುಟ್ಟಿಶಾಸ್ತಾವು, ಗುಳಿಗನ್ ಮತ್ತು ಪೊಟ್ಟನ್ ದೇವರುಗಳಿಗೆ ಅಷ್ಪಬಂಧ ಕಲಶಾಭಿಷೇಕವನ್ನು ಬ್ರಹ್ಮಶ್ರೀ ನಾರಾಯಣ ನಂಬೂದರಿ ಅವರು ನೆರವೇರಿಸಿದರು.
ದೇವಾಲಯದ ಪುನರ್ ಪ್ರತಿಷ್ಠಾಪನೆಯಾಗಿ ಹನ್ನೆರಡು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ದೇವಾಲಯ ಸಮಿತಿಯು ಅಧ್ಯಕ್ಷ ಎನ್.ಡಿ. ವಿನೋದ್ಕುಮಾರ್ ಮತ್ತು ಪದಾಧಿಕಾರಿಗಳ ಸಾರಥ್ಯದಲ್ಲಿ ಬ್ರಹ್ಮಕಲಶೋತ್ಸವವನ್ನು ಕಳೆದ ತಾ. ೨೧ ರಿಂದ ಆರಂಭಿಸಿದ್ದು, ತಾ. ೨೭ ರಂದು ಸಂಪನ್ನಗೊAಡಿತು.
ಕಳೆದ ಒಂದು ವಾರದಿಂದ ನಡೆದ ಪೂಜಾ ಕಾರ್ಯದಲ್ಲಿ ತಂತ್ರಿಗಳಾದ ವಿವೇಕ್, ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ, ಈಶ್ವರ್ ನಂಬೂದರಿ, ಹರೀಶ್ ನಂಬೂದರಿ, ಕೃಷ್ಣಕುಮಾರ್ ನಂಬೂದರಿ, ಮಧುಸೂದನ್ ನಂಬೂದರಿ, ಕೃಷ್ಣನ್ ನಂಬೂದರಿ, ನಾರಾಯಣ್ ನಂಬೂದರಿ, ಪ್ರಸನ್ನ ನಂಬೂದರಿ, ಜೋಯಿಷ ನಂಬೂದರಿ ಅವರುಗಳ ನೇತೃತ್ವದಲ್ಲಿ ಭುವನೇಶ್ವರಿ ದೇವಿ, ಗಣಪತಿ, ನಾಗದೇವರುಗಳು, ಅಯ್ಯಪ್ಪ ಸ್ವಾಮಿ, ಶ್ರೀಮುತ್ತಪ್ಪ ಸ್ವಾಮಿ, ಶ್ರೀ ತಿರುವಪ್ಪ, ಶ್ರೀವಿಷ್ಣುಮೂರ್ತಿ ಮತ್ತು ಪರಿವಾರ ದೇವರುಗಳಿಗೆ ಕಲಶೋತ್ಸವ ಮತ್ತು ಅಷ್ಟಬಂಧ ಕಲಶೋತ್ಸವವನ್ನು ನೆರವೇರಿಸಲಾಯಿತು. ನಂತರ ಮಹಾಪೂಜೆ ನಡೆದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ, ಋಷಿಗಳು ತಪಸ್ಸು ಮಾಡಿದ ಸ್ಥಳವಾಗಿರುವುದರಿಂದ ಈ ಪುಣ್ಯಕ್ಷೇತ್ರವು ಮುಂದಿನ ದಿನಗಳಲ್ಲಿ ನಿತ್ಯ ಅನ್ನದಾನವನ್ನು ಮಾಡುವ ಪವಿತ್ರ ಕ್ಷೇತ್ರವಾಗಲಿದೆ ಎಂದು ಅಷ್ಪಮಂಗಲ ಪ್ರಶ್ನೆಯಲ್ಲಿ ತಿಳಿದುಬಂದಿದೆ.
ಈ ದಿಸೆಯಲ್ಲೇ ದೇವಾಲಯದ ಎಲ್ಲಾ ಕಾರ್ಯಗಳು ನಡೆಯುತ್ತಿದೆ. ಮುತ್ತಪ್ಪ ಸ್ವಾಮಿ ದೇವಾಲಯಕ್ಕೆ ರೂ. ೮.೫೦ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಮುಖ ಮಂಟಪವನ್ನು ಸಮರ್ಪಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ವಿನೋದ್ಕುಮಾರ್ ತಿಳಿಸಿದರು.