ಮಡಿಕೇರಿ, ಮೇ ೨೭: ಗೋವುಗಳ ಸಂರಕ್ಷಣೆಗೆ ಕೈಜೋಡಿಸಬೇಕಿರುವ ಪಶು ವೈದ್ಯಾಧಿಕಾರಿಗಳು ನೀಡುವ ಪತ್ರದಿಂದಾಗಿ ಜಿಲ್ಲೆಯಲ್ಲಿ ಅಸಂಖ್ಯಾತ ಗೋವುಗಳ ಅಕ್ರಮ ಅಮಾನವೀಯ ರೀತಿಯ ಸಾಗಾಣಿಕೆ ನಡೆಯುತ್ತಿದ್ದು ಇದನ್ನು ಕಾನೂನು ಬದ್ಧವಾಗಿ ತಡೆಗಟ್ಟಲು ಪಶುವೈದ್ಯಾಧಿಕಾರಿ ವಿರುದ್ಧ ಹೋರಾಟ ನಡೆಸಲಾಗುವುದೆಂದು ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್ ಎಚ್ಚರಿಕೆ ನೀಡಿದ್ದಾರೆ.
ಗೋವುಗಳನ್ನು ಸಾಕಾಣಿಕೆ ಮತ್ತು ಕೃಷಿಯ ಉದ್ದೇಶಕ್ಕೆ ಮಾತ್ರ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಾಣಿಕೆ ಮಾಡಲು ಕಾನೂನಿನಡಿ ಅವಕಾಶವಿದ್ದು ಹಲವು ಕಾನೂನು ನಿಬಂಧನೆಗಳ ಪಾಲನೆಯೊಂದಿಗೆ ಸಕ್ಷಮ ಪ್ರಾಧಿಕಾರಗಳ ಅನುಮತಿ ಪತ್ರ ಪಡೆದೇ ಸಾಗಾಣಿಕೆ ಮಾಡುವುದು ಕಡ್ಡಾಯವಾಗಿರುತ್ತದೆ.
ಸಾಗಾಣಿಕೆ ಮಾಡುವವರು ಕೃಷಿ ಅಥವಾ ಸಾಕುವುದಕ್ಕಾಗಿಯೇ ಗೋವು ಗಳನ್ನು ಕೊಂಡೊಯ್ಯುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಲು ಸ್ಥಳೀಯಾಡಳಿತ ಗ್ರಾ.ಪಂ., ಪೋಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಪಶು ವೈದ್ಯಾಧಿಕಾರಿಯಿಂದ ಲಿಖಿತ ಅನುಮತಿ ಪಡೆಯಬೇಕಿರುತ್ತದೆ. ಮಹಜರು ನಡೆಸಿಯೇ ಅಧಿಕಾರಿಗಳು ಅನುಮತಿ ನೀಡಬೇಕಿದೆ. ಆದರೆ ಪಶುವೈದ್ಯಾಧಿಕಾರಿ ಇದ್ಯಾವುದನ್ನೂ ಪರಿಶೀಲಿಸದೇ ಕಚೇರಿಯಲ್ಲಿ ಕುಳಿತಲ್ಲಿಯೇ ಸೀಲು ಸಹಿ ಹಾಕಿ ನೀಡುವ ಪತ್ರದಿಂದಾಗಿ ವ್ಯಾಪಕ ಅಕ್ರಮಗಳು ಗೋಹತ್ಯೆ ಗೋಮಾಂಸ ಮಾರಾಟಗಳು ನಡೆದು ಗೋವುಗಳ ಸಂತತಿಯೇ ನಾಶವಾಗುತ್ತಿದೆ.
ಹಿಂದೂ ಜಾಗರಣಾ ವೇದಿಕೆಯು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಕಾನೂನೂ ಬಾಹಿರ ಅಕ್ರಮ ಗೋಸಾಗಾಟ ಮುಂದುವರಿದಿದ್ದು ತಾ. ೨೬ ರಂದು ಮಡಿಕೇರಿ ತಾಲ್ಲೂಕಿನ ಮೇಕೇರಿ ಬಳಿ ಸಣ್ಣ ಗೂಡ್ಸ್ ವಾಹನದಲ್ಲಿ ೪ ಗೋವುಗಳನ್ನು ಅಮಾನವೀಯ ರೀತಿಯಲ್ಲಿ ಸಾಗಾಣಿಕೆ ಮಾಡುತ್ತಿದ್ದುದನ್ನು ಸಂಘಟನೆ ಪತ್ತೆ ಹಚ್ಚಿದೆ. ಪಶು ವೈದ್ಯಾಧಿಕಾರಿಯೇ ಕಾನೂನು ಬಾಹಿರವಾಗಿ ಇದಕ್ಕೆ ಲಿಖಿತ ಅನುಮತಿ ನೀಡಿರುವ ಬಗ್ಗೆ ಹಿಂದೂ ಜಾಗರಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಮಾನವೀಯ ರೀತಿಯ ಸಾಗಾಟದ ಸಂದರ್ಭ ಗೋವು ಗಾಯಗೊಂಡು ನಿತ್ರಾಣಗೊಂಡಿತ್ತು.
ಈ ವಾಹನದಲ್ಲಿ ಗರಿಷ್ಠ ಎರಡು ಗೋವು ಮಾತ್ರ ಸಾಗಾಟ ಮಾಡ ಬಹುದಾಗಿದ್ದು ಪಶುವೈದ್ಯಾಧಿಕಾರಿ ೪ ಗೋವುಗಳ ಸಾಗಾಣಿಕೆಗೆ ಲಿಖಿತ ಅನುಮತಿ ನೀಡಿರುವುದು ಕಾನೂನು ಬಾಹಿರವಾಗಿದೆ. ಈ ವಿಷಯವಾಗಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅಕ್ರಮಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಲಾಗುವುದೆಂದು ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್ ತಿಳಿಸಿದ್ದಾರೆ.