ಮಡಿಕೇರಿ, ಮೇ ೨೭: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಹಾಕಿ ಪಂದ್ಯಾವಳಿಯಲ್ಲಿ ‘ಸೂಪರ್ -೪’ ಹಂತಕ್ಕೆ ಪ್ರವೇಶಿಸುವಲ್ಲಿ ಭಾರತ ಹಾಕಿತಂಡ ಯಶಸ್ವಿಯಾಗಿದೆ. ನಿನ್ನೆ ಇಂಡೋನೇಷಿಯಾ ಎದುರಿನ ಪಂದ್ಯದಲ್ಲಿ ಭಾರತ ಹಲವು ಲೆಕ್ಕಾಚಾರದೊಂದಿಗೆ ಆಡಬೇಕಾದ ಅನಿವಾರ್ಯತೆ ಇತ್ತು.
‘ಸೂಪರ್ -೪’ ಹಂತ ಪ್ರವೇಶಿಸಲು ಭಾರತ ೧೬-೦ ಗೋಲಿನ ಅಂತರದ ಜಯಗಳಿಸಲೇ ಬೇಕಾಗಿತ್ತು. ಏಕೆಂದರೆ ಪಾಕಿಸ್ತಾನವೂ ಸಮಬಲದಲ್ಲಿತ್ತು. ಒಂದು ವೇಳೆ ನಿನ್ನೆ ಭಾರತ ೧೪-೦ ಗೋಲಿನಿಂದ ಜಯಗಳಿಸಿದ್ದರೂ ಗೋಲು ಸರಾಸರಿ ಹಾಗೂ ಹಿಂದಿನ ಪಂದ್ಯದ ಆಧಾರದಲ್ಲಿ ಪಾಕಿಸ್ತಾನ ‘ಸೂಪರ್ -೪’ ಹಂತ ತಲುಪುವ ಸಾಧ್ಯತೆಯಿತ್ತು.
೧೫-೦ ಗೋಲಿನ ಜಯ ಬಂದರೂ ಮತ್ತೆ ಪಾಕಿಸ್ತಾನದೊಂದಿಗೆ ಶೂಟೌಟ್ ಮೊರೆ ಹೋಗಬೇಕಾಗಿತ್ತು. ಆದರೆ ಈ ನಿರ್ಣಾಯಕ ಪಂದ್ಯದಲ್ಲಿ ಭಾರತ ಇಂಡೋನೇಷಿಯಾ ಎದುರು ೧೬-೦ ಗೋಲಿನ ಜಯಗಳಿಸು ವದರೊಂದಿಗೆ ಯಶಸ್ಸು ಕಂಡಿದೆ.
‘ಸೂಪರ್-೪’ ಹಂತಕ್ಕೆ ಇದೀಗ ಭಾರತ ಜಪಾನ್, ಮಲೇಷಿಯಾ ಹಾಗೂ ಕೊರಿಯಾ ತಂಡಗಳು ಅರ್ಹತೆಗಳಿಸಿವೆ. ಪ್ರಥಮ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಪ್ರವೇಶಿಸಲಿವೆ. ೩ ಹಾಗೂ ನಾಲ್ಕನೇ ಸ್ಥಾನ ಪಡೆಯುವ ರಾಷ್ಟç ಕಂಚಿನ ಪದಕಕ್ಕೆ ಸೆಣಸಬೇಕಾಗಿದೆ.
ಭಾರತ ಮುಂದಿನ ಪಂದ್ಯ ತಾ. ೨೮ ರಂದು (ಇಂದು) ಜಪಾನ್ ವಿರುದ್ಧ ತಾ. ೨೯ ರಂದು ಮಲೇಷಿಯಾ ಹಾಗೂ ತಾ. ೩೧ ರಂದು ಕೊರಿಯಾ ವಿರುದ್ಧ (ಭಾರತೀಯ ಕಾಲಮಾನ) ಸಂಜೆ ೫ಕ್ಕೆ ಆಡಬೇಕಿದೆ.