ಸುಂಟಿಕೊಪ್ಪ, ಮೇ ೨೩: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳನೇ ಮೈಲು ನೇಗದಾಳು ಗ್ರಾಮದ ಮಹಾದೇಶ್ವರ ಈಶ್ವರ ದೇವಸ್ಥಾನದ ೬ನೇ ವಾರ್ಷಿಕೋತ್ಸವವು ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಶನಿವಾರ ನಡೆಯಿತು.
ಬೆಳಿಗ್ಗೆ ದೇವಾಲಯವನ್ನು ಶುದ್ಧೀಕರಿಸಿ ನಂತರ ಪೂರ್ಣ ಕುಂಭ ಕಳಶದೊಂದಿಗೆ ಮಹಿಳೆಯರು ಮೆರವಣಿಗೆ ಮೂಲಕ ಕೆರೆಯಿಂದ ಗಂಗಾಜಲವನ್ನು ದೇವಾಲಯಕ್ಕೆ ತಂದು ಕುಂಭಪೂಜೆ ಮಾಡಲಾಯಿತು. ಆನಂತರ ದೇವರಿಗೆ ವಿವಿಧ ಹೂವುಗಳ ಅಲಂಕಾರ ಪೂಜೆ, ಅರ್ಚನೆ ಪೂಜೆ, ಕುಂಕುಮಾರ್ಚನೆೆ, ಗಣಪತಿ ಹೋಮ, ರುದ್ರಾಭಿಷೇಕ ನಡೆಯಿತು.
ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಹೂ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ಕೆದಕಲ್ ಗ್ರಾಮದ ಭಕ್ತರು ಸೇರಿದಂತೆ ಹೊರ ಜಿಲ್ಲೆ ಮತ್ತು ರಾಜ್ಯಗಳಲ್ಲಿ ನೆಲೆಸಿದ್ದ ಸ್ಥಳೀಯರು ಆಗಮಿಸಿ ದೇವರಿಗೆ ಹರಕೆ ಅರ್ಪಿಸಿದರು. ಅವಿನಾಶ್ ಆರಾಧ್ಯ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ದೇವಾಲಯ ಸಮಿತಿಯ ವೈ.ಯಂ. ಕರುಂಬಯ್ಯ, ಯಂಕನ ಪೊನ್ನಣ್ಣ, ಪುಲ್ಲೇರ ತಿಮ್ಮಯ್ಯ, ಚೇಂದ್ರಿಮಾಡ ಕರುಂಬಯ್ಯ, ಯಂಕನ ಗೋಪಿ ಸೇರಿದಂತೆ ಇತರರು ಇದ್ದರು.