ಗುಡ್ಡೆಹೊಸೂರು, ಮೇ ೨೩: ಇಲ್ಲಿನ ಗ್ರಾಮ ಪಂಚಾಯಿತಿಯ ೨೦೨೧-೨೨ನೇ ಸಾಲಿನ ಕೆ.ಡಿ.ಪಿ. ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ ಅವರ ಅಧ್ಯಕ್ಷತೆಯಲ್ಲಿ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಯಶೋಧ ಮತ್ತು ಸದಸ್ಯರು ಹಾಜರಿದ್ದರು.
ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖಾಧಿಕಾರಿಗಳು ಹಾಜರಿದ್ದು ಮಾಹಿತಿ ನೀಡಿದರು. ಸಭೆಯಲ್ಲಿ ಹಾಜರಿದ್ದ ಕಂದಾಯ ಇಲಾಖಾಧಿಕಾರಿ ಗೌತಮ್ ಅವರನ್ನು ಪಂಚಾಯಿತಿ ವ್ಯಾಪ್ತಿಯ ಸ್ಮಶಾನ ಜಾಗದ ಬಗ್ಗೆ ಸದಸ್ಯರು ಮಾಹಿತಿ ಕೇಳಿದರು. ಮಾತನಾಡಿದ ಅಧಿಕಾರಿ ಮಾದಪಟ್ಟಣ, ಅತ್ತೂರು, ದೊಡ್ಡಬೆಟ್ಟಗೇರಿ ಗ್ರಾಮದ ಸ್ಮಶಾನ ಜಾಗದ ಬಗ್ಗೆ ಮಾಹಿತಿ ನೀಡಿದರು.
ಈ ಭಾಗದ ಸದಸ್ಯರು ಮಾತನಾಡಿ, ಗದ್ದೆ ನಾಟಿ ಕಾರ್ಯಕ್ಕೆ ಚಿಕ್ಲಿಹೊಳೆ ಜಲಾಶಯದ ನೀರನ್ನು ಅವಲಂಬಿಸಿರುವ ರೈತರ ಗದ್ದೆಗಳಿಗೆ ನೀರು ಪೂರೈಸುವ ಕಾರ್ಯ ಆಗಬೇಕಾಗಿದೆ. ನಾಲೆಯ ಹೂಳೆತ್ತುವ ಕಾರ್ಯ ನಡೆಸುವಂತೆ ಈ ಸಂದರ್ಭ ಒತ್ತಾಯಿಸಲಾಯಿತು. ನೀರಾವರಿ ಇಲಾಖಾಧಿಕಾರಿ ಕಿರಣ್ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಒಟ್ಟು ೨೨ ಕಿ.ಮೀ. ನಾಲೆ ಜಂಗಲ್ ಕಟ್ ಮಾಡಬೇಕು, ಆದರೆ ೭ ಕಿ.ಮೀ. ಕಾಮಗಾರಿಗೆ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು. ಅರಣ್ಯ ಇಲಾಖಾಧಿಕಾರಿಗಳಿಗೆ ಸದಸ್ಯರು ಮನವಿ ಮಾಡಿ ಹಾರಂಗಿ ರಸ್ತೆ ಬದಿಯ ಮರಗಳನ್ನು ತೆರವು ಮಾಡುವಂತೆ ಒತ್ತಾಯಿಸಿದರು. ಪಿಡಿಓ ಶ್ಯಾಂ, ಪಶುಸಂಗೋಪನೆ ಇಲಾಖೆಯ ಅಧಿಕಾರಿ ರಾಜ್‌ಕುಮಾರ್, ತೋಟಗಾರಿಕೆ ಇಲಾಖಾಧಿಕಾರಿ ಕಾವ್ಯ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಹಾಜರಿದ್ದರು.