ಮಡಿಕೇರಿ, ಮೇ ೨೩: ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳಿಗೆ ಸ್ವ ಉದ್ಯೋಗ ಹಾಗೂ ಆರ್ಥಿಕ ಉತ್ತೇಜನ ನೀಡುವಲ್ಲಿ ಸರ್ಕಾರ ೧೮ ರಿಂದ ೨೭ ವರ್ಷ ದೊಳಗಿನ ಯುವ ಜನರಿಗೆ ವಿವಿಧ ಯೋಜನೆ ಹಮ್ಮಿಕೊಂಡಿದ್ದು, ಜಿಲ್ಲೆಯ ಯುವ ಒಕ್ಕೂಟಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜೊತೆ ಕೈಜೋಡಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್. ಗುರುಸ್ವಾಮಿ ಅವರು ಕೋರಿದ್ದಾರೆ.

ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯಲ್ಲಿ ಯುವ ಒಕ್ಕೂಟದ ಅಧ್ಯಕ್ಷರು, ಸದಸ್ಯರು ಹಾಗೂ ಯುವ ಸ್ಪಂದನ ಸಮಾಲೋಚಕರ ಜೊತೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸ್ಥಳೀಯವಾಗಿ ದೊರೆಯುವ ಸಂಪನ್ಮೂಲವನ್ನು ಬಳಸಿಕೊಂಡು ಸ್ವಾಮಿ ವಿವೇಕಾನಂದ ಯುವ ಸಂಘಗಳ ಸದಸ್ಯರಿಗೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಕೊಡಿಸು ವುದು, ಮಾರುಕಟ್ಟೆ ಕಲ್ಪಿಸುವುದು, ಯುವಜನರನ್ನು ಮುಖ್ಯವಾಹಿನಿಗೆ ತರುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಜಿ.ಎಸ್. ಗುರುಸ್ವಾಮಿ ತಿಳಿಸಿದರು.

ಜಿಲ್ಲೆಯ ೧೦೪ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿಗೆ ಒಂದರAತೆ ಸ್ವಾಮಿ ವಿವೇಕಾನಂದ ಸ್ವಸಹಾಯ ಗುಂಪುಗಳನ್ನು ರಚಿಸಬೇಕು. ಜೊತೆಗೆ ಈ ಸ್ವಸಹಾಯ ಗುಂಪಿಗೆ ಸದಸ್ಯ ರಾಗಲು ಆದ್ಯತೆ ನೀಡುವಂತಾಗ ಬೇಕು. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಉಪಯೋಗಿಸಿ ಕೊಂಡು ತಾಲೂಕು ಯುವ ಕೇಂದ್ರವನ್ನು ಬಲಪಡಿಸಬೇಕಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿತವಾದ ಯುವ ಸಂಘಗಳ ಮೂಲಕ ಗ್ರಾಮೀಣ ಯುವಜನರಿಗೆ ಸ್ವ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳನ್ನು ಉತ್ತೇಚಿಸುವಲ್ಲಿ ಸುಸ್ಥಿರ ಸ್ವಸಹಾಯ ಸಂಘ ಸ್ಥಾಪಿಸಬೇಕಿದೆ ಎಂದು ಗುರುಸ್ವಾಮಿ ಹೇಳಿದರು.

ಜಿಲ್ಲೆಯಲ್ಲಿ ೩೦೦ ಕ್ಕೂ ಹೆಚ್ಚು ಯುವ ಸಂಘಗಳು ಇದ್ದು, ಏಳು ಸಂಘಗಳು ಮಾತ್ರ ಪ್ರತಿ ವರ್ಷ ನವೀಕರಣ ಮಾಡಿಕೊಂಡು ಕ್ರಿಯಾಶೀಲವಾಗಿವೆ. ಇತರ ಸಂಘಗಳು ಸಹ ನವೀಕರಣ ಮಾಡಿಕೊಂಡು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.

ಯುವ ಸ್ಪಂದನ ಜಿಲ್ಲಾ ಸಮಾಲೋಚಕರಾದ ಚೇತನ್ ಅವರು ಯುವಸ್ಪಂದನ ತಂಡದವರು ಯುವಜನರಿಗೆ ಆರ್ಥಿಕ ಚಟುವಟಿಕೆ ಕೈಗೊಳ್ಳುವ ನಿಟ್ಟಿನಲ್ಲಿ ಅಗತ್ಯ ಮಾಹಿತಿ ನೀಡುವುದರ ಜೊತೆಗೆ ಯುವಜನರಿಗೆ ವಿದ್ಯಾಭ್ಯಾಸ, ಸುರಕ್ಷತೆ ಮತ್ತಿತರ ಬಗ್ಗೆ ಮಾರ್ಗದರ್ಶನ ಮಾಡಲಾಗುತ್ತದೆ ಎಂದರು.

ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ಸದಸ್ಯೆ ನೇತ್ರಾವತಿ ಅವರು ಹಲವು ಸಲಹೆ ನೀಡಿದರು. ತಾಲೂಕು ಯುವಸ್ಪಂದನ ಪರಿವರ್ತಕರಾದ ಯುಗ ದೇವಯ್ಯ, ಕಾರ್ತಿಕ್, ಗುರುದೇವ್ ಇತರರು ಇದ್ದರು.