ಮಡಿಕೇರಿ ಮೇ ೨೩: ಅಗ್ನಿ ಅವಘಡದಿಂದ ಮನೆ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡ ನಗರದ ಮೆಡಿಕಲ್ ಕಾಲೇಜು ಬಳಿಯ ನಿವಾಸಿ ಸುನೀಲ್ ಡಿಸೋಜ ಅವರಿಗೆ ಕೊಡಗು ರಕ್ಷಣಾ ವೇದಿಕೆ ಆರ್ಥಿಕ ನೆರವು ನೀಡಿದೆ. ಇತ್ತೀಚೆಗೆ ಸುನೀಲ್ ಅವರ ಮನೆ ಹೊತ್ತಿ ಉರಿದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿತ್ತು. ಇದನ್ನು ಮನಗಂಡ ಕೊರವೇ ತನ್ನ ಸದಸ್ಯರಿಂದ ಹಣ ಸಂಗ್ರಹಿಸಿತು. ವೇದಿಕೆಯ ಜಿಲ್ಲಾಧ್ಯಕ್ಷ ಪವನ್ ಪೆಮ್ಮಯ್ಯ ಹಾಗೂ ಮಡಿಕೇರಿ ನಗರಾಧ್ಯಕ್ಷ ಶರತ್ ಅಗ್ನಿಗಾಹುತಿಯಾದ ಮನೆಗೆ ಭೇಟಿ ನೀಡಿ ಸುನೀಲ್ ಡಿಸೋಜ ಅವರಿಗೆ ಹಣವನ್ನು ಹಸ್ತಾಂತರಿಸಿದರು. ಸರಕಾರ ಹಾಗೂ ಜಿಲ್ಲಾಡಳಿತ ಕೂಡ ಅಗತ್ಯ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.