ಕಣಿವೆ, ಮೇ ೨೨: ವಿದ್ಯಾರ್ಥಿ ಗಳು ಉತ್ಸುಕದಿಂದ ತಮ್ಮ ಆತ್ಮ ರಕ್ಷಣೆ ಗಾಗಿ ಕರಾಟೆಯನ್ನು ಕಲಿಯುತ್ತಿ ರುವುದು ಶ್ಲಾಘನೀಯ ಎಂದು ಜಿಲ್ಲೆಯ ಖ್ಯಾತ ಕರಾಟೆ ಪಟುವೂ ಆದ ಮಾಜಿ ಶಾಸಕ ಅರುಣ್ ಮಾಚಯ್ಯ ಹೇಳಿದರು.
ಕುಶಾಲನಗರದ ರೈತ ಸಹಕಾರ ಭವನದ ಸಭಾಂಗಣದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಕೊಡಗು ಆಶ್ರಯದಲ್ಲಿ ಏರ್ಪಡಿಸಿದ್ದ ೬ನೇ ವರ್ಷದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕರಾಟೆ ಸ್ವಯಂ ರಕ್ಷಣೆಯ ಕಲೆಯಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕರಾಟೆಯತ್ತ ಆಕರ್ಷಿತರಾಗುತ್ತಿರುವುದು ಅತ್ಯಂತ ಸಂತಸದ ವಿಚಾರ. ವಿದ್ಯಾರ್ಥಿಗಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವಲ್ಲಿ ಕರಾಟೆ ಸಹಕಾರಿಯಾಗಿದೆ. ವಿದ್ಯಾರ್ಥಿನಿಯರು ಆತ್ಮ ರಕ್ಷಣೆಗೆ ಕರಾಟೆ ಕಲಿಯುವುದು ಅಗತ್ಯ ಎಂದರು. ವಿದ್ಯಾರ್ಥಿಗಳು ತಮ್ಮ- ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಕರಾಟೆಯ ಬಗ್ಗೆ ತಿಳಿಸಿಕೊಳ್ಳಬೇಕು ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಡಗು ಘಟಕದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಆತ್ಮರಕ್ಷಣೆಗಾಗಿ ಕರಾಟೆ ಕಲೆಯನ್ನು ಕರಗತ ಮಾಡಿಕೊಳ್ಳುವ ಮೂಲಕ ನಿರ್ಭಯವಾಗಿ ಓಡಾಡಬಹುದು ಎಂದರು. ಜಗತ್ತಿನಲ್ಲಿ ಕರಾಟೆಗೆ ಸಾಕಷ್ಟು ಮಹತ್ವ ದೊರೆಯುತ್ತಿದೆ. ಮಕ್ಕಳು ಹಾಗೂ ಯುವಕರಲ್ಲಿ ಕರಾಟೆ ಕಲಿಕೆಯಲ್ಲಿ ಆಸಕ್ತಿ ಮೂಡುತ್ತಿದೆ. ವಿಶೇಷವಾಗಿ ಬಾಲಕಿಯರು, ಮಹಿಳೆಯರು ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಯುವ ಅಗತ್ಯವಿದೆ. ಕರಾಟೆಯಿಂದ ಚಿಕ್ಕಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂದರು.
ಈ ಸಂದರ್ಭ ದೈಹಿಕ ಶಿಕ್ಷಣ ಅಧಿಕಾರಿ ಡಾ.ಸದಾಶಿವಯ್ಯ ಎಸ್ ಪಲ್ಲೇದ್, ಗ್ರಾಮಾಂತರ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ವಿ.ಪಿ. ಶಶಿಧರ್, ಪಟ್ಟಣ ಪಂಚಾಯಿತಿ ಸದಸ್ಯ ಆನಂದ್ ಕುಮಾರ್, ಯೂನಿಕ್ ಅಕಾಡೆಮಿ ವಿದ್ಯಾ ಸಂಸ್ಥೆಯ ಸಂಯೋಜಕರಾದ ಸುಪ್ರಿತಾ, ಕೂಡಿಗೆಯ ಅಂಜಲ ವಿದ್ಯಾನಿಕೇತನ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ವೀಣಾವಿಜಯ ಕ್ಯಾಸಿಲೋನ ಸೇರಿದಂತೆ ಮತ್ತಿತರರು ಹಾಜರಿದ್ದರು.
ಕರಾಟೆ ಸ್ಪರ್ಧೆಯಲ್ಲಿ ಕೊಡಗು, ಹಾಸನ, ಮೈಸೂರು, ದಕ್ಷಿಣ ಕನ್ನಡ, ಬೆಂಗಳೂರು, ಹೆಚ್.ಡಿ.ಕೋಟೆ, ಚಿಕ್ಕಮಗಳೂರು ಸೇರಿದಂತೆ ಮತ್ತಿತರರ ಜಿಲ್ಲೆಯ ಸುಮಾರು ೬೦೦ ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.ಕತಾ, ಹಾಗೂ ಕುಮಿತೆ ವಿಭಾಗದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು. ಕರಾಟೆ ಸ್ಪರ್ಧೆಯಲ್ಲಿ ಶನಿವಾರಸಂತೆಯ ಅರುಣ್ ಎನ್.ಎಸ್ ಅವರ ನೇತೃತ್ವದ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಹೆಚ್.ಜೆ. ಸಂಕೇತ್ ನೇತೃತ್ವದ ತಂಡ ದ್ವಿತೀಯ ಸ್ಥಾನ ಪಡೆಯಿತು.