ಮಡಿಕೇರಿ, ಮೇ ೨೨: ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಸಂಚಾರಿ ಸಿಗ್ನಲ್ ಲೈಟ್ ಅಳವಡಿಸಬೇಕು ಮತ್ತು ಪ್ರಯಾಣಿಕರು ಹಾಗೂ ಚಾಲಕರ ಅನುಕೂಲಕ್ಕಾಗಿ ಆಟೋರಿಕ್ಷಾ ನಿಲ್ದಾಣಗಳಲ್ಲಿ ಮೇಲ್ಛಾವಣಿ ಹಾಕಬೇಕು ಎಂದು ಕೊಡಗು ರಕ್ಷಣಾ ವೇದಿಕೆಯ ಆಟೋ ಚಾಲಕರ ಸಂಘ ಒತ್ತಾಯಿಸಿದೆ.

ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಂಘದ ಪ್ರಮುಖರು, ಆಟೋ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸುವAತೆ ಮನವಿ ಮಾಡಿದರು.

ಮಳೆ, ಚಳಿಯ ನಡುವೆ ಹಗಲಿರುಳೆನ್ನದೆ ದುಡಿಯುತ್ತಿರುವ ಆಟೋ ಚಾಲಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕು. ನಗರದಲ್ಲಿ ಸುಮಾರು ೨ ಸಾವಿರ ಆಟೋ ರಿಕ್ಷಾಗಳಿದ್ದು, ವಿವಿಧೆಡೆ ಇರುವ ಆಟೋ ನಿಲ್ದಾಣಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಮಳೆ ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಿಲ್ದಾಣಕ್ಕೆ ಮೇಲ್ಛಾವಣಿ ಅಳವಡಿಸಿ ಕೊಡಬೇಕು. ದಿನದಿಂದ ದಿನಕ್ಕೆ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಆಟೋಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಆದ್ದರಿಂದ ನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರಿ ಸಿಗ್ನಲ್ ಲೈಟ್ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಕೊ.ರ.ವೇ. ನಗರಾಧ್ಯಕ್ಷ ಶರತ್, ಪ್ರಧಾನ ಕಾರ್ಯದರ್ಶಿ ಬನ್ಸಿ ನಾಣಯ್ಯ, ನಿರ್ದೇಶಕ ರವಿ ಪಾಪು, ಕೊರವೇ ಆಟೋ ಚಾಲಕರ ಸಂಘದ ಸಂಚಾಲಕರಾದ ಸುಲೇಮಾನ್, ವಿನು, ಚಾಲಕರುಗಳಾದ ಹೆಚ್.ಆರ್. ರಾಜ, ಗಿರೀಶ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.