ಚೆಟ್ಟಳ್ಳಿ, ಮೇ ೨೨: ಬೊಟ್ಟಿಯತ್ ನಾಡಿನ ಪುರಾತನ ಪ್ರಸಿದ್ಧಿ ಪಡೆದ ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ಹಳ್ಳಿಗಟ್ ಬೋಡ್ ನಮ್ಮೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಪೊಲವಪ್ಪ ದೇವರ ತೆರೆಯಂದು ಗುಡಿಯತ್ ಅಯ್ಯಪ್ಪ ದೇವರ ‘ಅವುಲ್’ ಎನ್ನುವ ವಿಶೇಷ ಆಚರಣೆ ನೆರವೇರಿತು. ಇಲ್ಲಿಯ ವಿಶೇಷತೆ ಎಂದರೆ ಗುಂಡಿಯತ್ ಅಯ್ಯಪ್ಪ ದೇವಸ್ಥಾನದಲ್ಲಿ ತಲತಲಾಂತರ ದಿಂದ ಕೊಡವರೇ ಪೂಜಾರಿ ಗಳಾಗಿದ್ದು, ಪೂಜಾ ಕೈಂಕರ್ಯವನ್ನು ಇವರೇ ನಡೆಸಿಕೊಂಡು ಬರುತ್ತಿದ್ದಾರೆ. ಹಬ್ಬದ ಒಂದು ದಿನ ಮುಂಚಿತವಾಗಿ ಊರಿನವರು ವಿವಿಧ ವೇಷ ಧರಿಸಿ ಊರಿನ ಮನೆಗಳಿಗೆ ತೆರಳುವರು. ಸಂಜೆ ಭದ್ರಕಾಳಿ ದೇವರ ಎರಡು ಪೂಮೊಗ ಮತ್ತು ಎರಡು ಕೃತಕ ಕುದುರೆ ಹೊತ್ತವರು ಮೂಕಳೇರ ಕುಟುಂಬದ ಐನ್ ಮನೆಯಿಂದ ತೆರಳಿ ಭದ್ರಕಾಳಿ ದೇವಾಲಯ ಪಕ್ಕದ ಅಂಬಲದಲ್ಲಿ ಸೇರಿ ಶ್ರದ್ಧಾಭಕ್ತಿಯಿಂದ ಹಬ್ಬವನ್ನು ಆಚರಿಸಿದರು. ಈ ಬಾರಿ ಊರ್ ತಕ್ಕರಾದ ಚಮ್ಮಟೀರ ಕುಟುಂಬದಲ್ಲಿ ಸೂತಕದ ಕಾರಣ ಮಚ್ಚಿಯಂಡ ಕುಟುಂಬದ ಅಂಬಲದಿAದ ಹೊರಟ ಕೃತಕ ಕುದುರೆಯೊಂದಿಗೆ ಊರಿನವರು ಹಬ್ಬದ ಆಚರಣೆಯನ್ನು ಸಂಪ್ರದಾಯಬದ್ಧವಾಗಿ ನಡೆಸಿದರು.
ಹಳ್ಳಿಗಟ್ ಬೋಡ್ ನಮ್ಮೆಯಲ್ಲಿ ‘ಬಂಡ್ ಕಳಿ’ ಅಥವಾ ‘ಕೆಸರೆರಚಾಟ’ ಇಲ್ಲಿನ ವಿಶೇಷ. ಭದ್ರಕಾಳಿ ದೇವಸ್ಥಾನ ಹತ್ತಿರದ ದೇವರ ಕೆರೆಯ ಕೆಸರನ್ನು ತಂದು ಎಲ್ಲರು ಪರಸ್ಪರ ಮೈಗೆ ಎರಚುತ್ತ ಸಂತೋಷದಿAದ ದೇವರ ಹಬ್ಬವನ್ನು ಆಚರಿಸುವುದೇ ಇಲ್ಲಿನ ವಿಶೇಷ. ಆ ಊರಿನ ಪುರುಷರಿಗೆ ಊರಿನವರಿಗೆ ಮಾತ್ರ ಇಲ್ಲಿ ಕೆಸರು ಎರೆಚಬೇಕು. ಮಹಿಳೆಯರಿಗೆ ಹಾಗೂ ಹೊರ ಊರಿನವರಿಗೆ ಹಾಗೂ ನೆಂಟರಿಷ್ಟರಿಗೆ ಕೆಸರು ಎರಚುವಂತಿಲ್ಲ.
- ಪುತ್ತರಿರ ಕರುಣ್ ಕಾಳಯ್ಯ