ಸೋಮವಾರಪೇಟೆ, ಮೇ ೨೨: ಮುಖ್ಯಮಂತ್ರಿಗಳ ಪಟ್ಟಣ ಹಾಗೂ ಪ್ರದೇಶಾಭಿವೃದ್ದಿ ನಿಧಿಯಡಿ ರೂ. ೧.೫ ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಪಟ್ಟಣದ ಹೈಟೆಕ್ ಮಾರುಕಟ್ಟೆಗೆ ಧಿಡೀರ್ ಭೇಟಿ ನೀಡಿದ ಶಾಸಕ ಅಪ್ಪಚ್ವು ರಂಜನ್ ಅವರು, ಅವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತಕ್ಷಣವೇ ದುರಸ್ತಿಪಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಶಾಸಕ ರಂಜನ್ ಪ್ರಯತ್ನದಿಂದ ಒದಗಿಸಲಾಗಿದ್ದ ನಗರೋತ್ಥಾನ ಯೋಜನೆಯಡಿಯಲ್ಲಿ ೧.೫ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೈಟೆಕ್ ಮಾರುಕಟ್ಟೆ ಮಳೆಗಾಲದಲ್ಲಿ ಸೋರಿ, ಅವ್ಯವಸ್ಥೆಯ ಆಗರವಾಗಿದ್ದು, ಕಳೆದ ಸೋಮವಾರ ಸಂತೆಯ ದಿನ ಸುರಿದ ಭಾರಿಮಳೆಗೆ ಹೈಟೆಕ್ ಮಾರುಕಟ್ಟೆ ಆವರಣ ಜಲಾವೃತವಾಗಿ ತರಕಾರಿ ಪದಾರ್ಥಗಳೆಲ್ಲಾ ನೀರಿನಲ್ಲಿ ತೇಲುತ್ತಿದ್ದು ವರ್ತಕರು ಹಾಗೂ ಗ್ರಾಹಕರು ತೊಂದರೆ ಅನುಭವಿಸಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಸುಳಿವು ನೀಡದೆ ಪಂಚಾಯ್ತಿ ಕಚೇರಿಗೆ ಆಗಮಿಸಿದ ಶಾಸಕ ರಂಜನ್, ಆಡಳಿತ ವ್ಯವಸ್ಥೆಗೆ ಚರುಕುಮುಟ್ಟಿಸಿದರು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಮಾರುಕಟ್ಟೆ ಆವರಣಕ್ಕೆ ಕರೆದೊಯ್ದು ಶಾಸಕರು ಅಲ್ಲಿನ ಅವ್ಯವಸ್ಥೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಮಾರುಕಟ್ಟೆ ಆವರಣದ ಮೇಲ್ಛಾವಣಿಯು ತುಕ್ಕುಹಿಡಿದು ಅಲ್ಲಲ್ಲಿ ತುಂಡಾಗಿ ಎಲ್ಲೆಂದರಲ್ಲಿ ನೀರುಸುರಿಯುತ್ತಿರುವುದರಿಂದ ಮತ್ತು ನೀರು ಹೊರ ಹರಿಯಲು ಸಾಧ್ಯವಾಗದ್ದರಿಂದ ಮಾರುಕಟ್ಟೆ ಜಲಾವೃತ್ತ ವಾಗುತ್ತಿರುವುದನ್ನು ಗಮನಿಸಿದ ಶಾಸಕರು ಮೇಲ್ಛಾವಣಿಯ ಭಾಗಕ್ಕೆ ಫೈಬರ್ ಶೀಟ್‌ಗಳನ್ನು ಅಳವಡಿಸಿ, ನೀರು ಹರಿಯಲು ವ್ಯವಸ್ಥೆ ಮಾಡಿ, ಕೆಳಗೆ ಬಿದ್ದ ನೀರು ಸರಾಗವಾಗಿ ಹರಿಯುವಂತೆ ಚರಂಡಿ ದುರಸ್ಥಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಕ್ಷಣವೇ ಮೇಲ್ಛಾವಣಿ ನಿರ್ಮಾಣದ ಪರಿಣಿತರಾದ ಕುಶಾಲನಗರದ ಪುಂಡರೀಕಾಕ್ಷ ರವರನ್ನು ಕರೆಯಿಸಿ ತುರ್ತಾಗಿ ಗುಣಮಟ್ಟದ ದುರಸ್ತಿ ಕಾರ್ಯಮಾಡುವಂತೆ ತಿಳಿಸಿದರು.
ಮಾರುಕಟ್ಟೆ ಆವರಣದಲ್ಲಿ ಬೀಡಾಡಿ ಜಾನುವಾರುಗಳು ಬೀಡುಬಿಟ್ಟಿರುವುದು ಹಾಗೂ ಅನಗತ್ಯ ವಸ್ತುಗಳನ್ನು ಇಟ್ಟಿರುವುದನ್ನು ಗಮನಿಸಿದ ಶಾಸಕರು ಗೇಟ್ ನಿರ್ಮಿಸುವಂತೆ ನಿರ್ದೇಶನ ನೀಡಿದರು. ಗೇಟ್ ಬೀಗವನ್ನು ಭಾನುವಾರ ತೆಗೆದು ಸೋಮವಾರದ ಸಂತೆಗೆ ಮುಕ್ತವಾಗಿಸಿ ಮಂಗಳವಾರ ಗೇಟ್ ಬೀಗ ಹಾಕುವಂತೆ ಮುಖ್ಯಾಧಿಕಾರಿ ನಾಚಪ್ಪನವರಿಗೆ ಸೂಚಿಸಿದರು.
ಈ ಸಂದರ್ಭ ಪ.ಪಂ.ಅಧ್ಯಕ್ಷ ಚಂದ್ರು, ಸದಸ್ಯರುಗಳಾದ ಮಹೇಶ್, ಜೀವನ್, ಮೃತ್ಯುಂಜಯ, ಎಸ್.ಮಹೇಶ್, ಸೋಮೇಶ್, ಶರತ್, ತಾಲೂಕು ಬಿ.ಜೆ.ಪಿ.ಅಧ್ಯಕ್ಷ ಮನುಕುಮಾರ್ ರೈ, ಅಭಿಯಂತರ ವೆಂಕಟೇಶ್, ಶಾಸಕರ ಆಪ್ತ ಸಹಾಯಕ ರವಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಜರಿದ್ದರು.