ನಾಪೋಕ್ಲು, ಮೇ ೨೨: ರಾಜ್ಯ ಸರಕಾರ ಮನೆ ಮನೆಗೆ ೭೨ ಗಂಟೆಯೊಳಗೆ ಪಿಂಚಣಿ ನೀಡುವ ಯೋಜನೆಯನ್ನು ಕೈಗೊಂಡಿದ್ದು, ನಾಪೋಕ್ಲು ಹೋಬಳಿಯ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ೭೩ ಮಂದಿಗೆ ಅರ್ಹ ಫಲಾನುಭವಿಗಳಿಗೆ ನಾಡ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅರ್ಹತಾ ಪತ್ರ ವಿತರಿಸಿದರು.

೩೧ ಮಂದಿಗೆ ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, ೩೪ ಮಂದಿಗೆ ಸಂಧ್ಯಾ ಸುರಕ್ಷಾ, ೧೫ ಮಂದಿ ವಿಧವೆಯರಿಗೆ ವಿಧವಾ ವೇತನ ಮತ್ತು ೩ ಮಂದಿ ವಿಶೇಷಚೇತನರಿಗೆ ಮಂಜೂರಾತಿ ಪತ್ರವನ್ನು ವಿತರಿಸಿದರು. ನಂತರ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಜನರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರಕಾರ ವಿನೂತನ ಕ್ರಮ ಕೈಗೊಂಡಿದ್ದು, ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳುವಂತೆ ಕೋರಿದರು.

ಮಡಿಕೇರಿ ತಹಶೀಲ್ದಾರ್ ಮಹೇಶ್ ಯೋಜನೆಯ ಸಮಗ್ರ ಮಾಹಿತಿ ನೀಡಿದರು. ಕಂದಾಯ ಪರಿವೀಕ್ಷಕ ರವಿಕುಮಾರ್ ಫಲಾನುಭವಿಗಳ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪ ತಹಶೀಲ್ದಾರ್ ಸುನಿಲ್ ಕುಮಾರ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಉಪಾಧ್ಯಕ್ಷ ದೀಪು ದೇವಯ್ಯ, ತಾಲೂಕು ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯ ಶಿವಚಾಳಿಯಂಡ ಜಗದೀಶ್, ಗ್ರಾಮ ಲೆಕ್ಕಿಗರಾದ ಅಮೃತಾ, ಜನಾರ್ಧನ, ಸಿಬ್ಬಂದಿಯವರು ಮತ್ತು ಫಲಾನುಭವಿಗಳು ಇದ್ದರು.