ಕೂಡಿಗೆ, ಮೇ ೨೧: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ವಾರದ ಸಂತೆ ಪ್ರತಿ ಶನಿವಾರ ಗ್ರಾಮ ಪಂಚಾಯಿತಿ ಕಟ್ಟಡದ ಸಮೀಪದಲ್ಲಿ ಕಳೆದ ೧೦ ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಇದೀಗ ಕೆಲ ವರ್ಷಗಳಲ್ಲಿ ನಿಗದಿಯಾದ ಸ್ಥಳದಲ್ಲಿ ವಾರದ ಸಂತೆ ನಡೆಯದೆ ಹೆಚ್ಚು ವಿಸ್ತಾರವಾಗಿ ಹೆದ್ದಾರಿ ಬದಿಯಲ್ಲಿ ಸಂತೆ ನಡೆಯುತ್ತಿದ್ದು, ಇದರಿಂದ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಹೆಚ್ಚು ವಾಹನಗಳ ಸಂಚಾರವಿರುವ ಕುಶಾಲನಗರ-ಕೂಡಿಗೆ-ಹಾಸನ ಹೆದ್ದಾರಿಯ ರಸ್ತೆಯಲ್ಲಿ ವಾರದ ಸಂತೆಯ ಅಂಗಡಿಗಳು ತೆರೆದಿದ್ದು, ವಾಹನ ಚಾಲಕರಿಗೂ, ಜೊತೆಗೆ ವಸ್ತುಗಳನ್ನು ಖರೀದಿಸಲು ಬರುವ ಗ್ರಾಹಕರಿಗೂ ತೊಂದರೆ ಉಂಟಾಗುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೂ. ೨೦ ಲಕ್ಷ ವೆಚ್ಚದಲ್ಲಿ ವಾರದ ಸಂತೆಗೆ ಅನುಕೂಲ ವಾಗುವಂತೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಹೆಚ್ಚು ವ್ಯಾಪಾರಿಗಳು ವಾರದ ಸಂತೆಗೆ ಅಂಗಡಿಗಳನ್ನು ಇಟ್ಟು ಮಾರಾಟ ಮಾಡಲು ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗೆ ವಾರ್ಷಿಕ ಹರಾಜಿನಲ್ಲಿ ಅಧಿಕ ಹಣ ಬರುತ್ತಿದೆ. ಆದರೆ ವ್ಯಾಪಾರಿಗಳು ಮಾತ್ರ ಕುಶಾಲನಗರ-ಹಾಸನ ಹೆದ್ದಾರಿಯಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವುದು ಮತ್ತು ಅವರ ವಾಹನಗಳನ್ನು ಸಹ ಅಲ್ಲಿಯೇ ನಿಲ್ಲಿಸುವುದರಿಂದ ಅನೇಕ ಬಾರಿ ಅನಾಹುತಗಳು ಸಂಭವಿಸಿವೆ. ಆದರೂ ಗ್ರಾಮ ಪಂಚಾಯಿತಿ ಯಾವುದೇ ಕ್ರಮವನ್ನು ತೆಗೆದು ಕೊಳ್ಳುವ ಹಂತಕ್ಕೆ ಹೋಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ಅವಘಡಗಳ ಪ್ರಸಂಗಗಳು ನಡೆದ ಪರಿಣಾಮವಾಗಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ವಾರದ ಸಂತೆಯ ದಿನ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತಿದೆ.

ಆದರೆ ಮಾರಾಟ ಗಾರರು ಹೆಚ್ಚಾಗಿ ಹೆದ್ದಾರಿಯ ರಸ್ತೆಯಲ್ಲಿ ಅಂಗಡಿಗಳನ್ನು ಹಾಕಿದರೆ ಪೊಲೀಸರೂ ಏನು ಮಾಡಲು ಸಾಧ್ಯವಿಲ್ಲದಾಗಿದೆ. ವಾಹನಗಳ ಸಂಚಾರ ನಿಯಂತ್ರಣ ಮಾಡಬಹುದೇ ವಿನಾಃ ಅಂಗಡಿಗಳನ್ನು ತೆರವು ಮಾಡಲು ಸಾಧ್ಯವಿಲ್ಲದಾಗಿದೆ.

ಈ ವಾರದ ಸಂತೆಯನ್ನು ಸಮೀಪದ ಕೃಷಿ ಇಲಾಖೆಯ ಆವರಣದಲ್ಲಿರುವ ಖಾಲಿ ಜಾಗದಲ್ಲಿ ನಡೆಸಿದರೆ ಮುಂದಾಗುವ ಅನಾಹುತಗಳನ್ನು ತಪ್ಪಿಸ ಬಹುದಾಗಿದೆ ಎಂಬದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಸಂಬAಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಆಡಳಿತ ಮಂಡಳಿಯವರು ತುರ್ತಾಗಿ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರ ಆಗ್ರಹವಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ.