ಸುಂಟಿಕೊಪ್ಪ, ಮೇ ೨೧: ಸಮೀಪದ ಹರದೂರು ಪಂಚಾಯಿತಿಯಲ್ಲಿ ಸೂರಿಗಾಗಿ ಸಮರ ಸಮಿತಿ ವತಿಯಿಂದ ನಿವೇಶನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಜಿಲ್ಲಾ ಯನೈಟೆಡ್ ಪ್ಲಾಂಟೇಶನ್ ವರ್ಕರ್ ಯೂನಿಯನ್ ಸೂರಿಗಾಗಿ ಸಮರ ಸಮಿತಿ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ಮತ್ತು ಜಾತಿಗಳಿಗೆ ಸೇರಿದವರು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು ನಿವೇಶನಗಳಿಲ್ಲದೆ ಜೀವನ ದೂಡುತ್ತಿದ್ದಾರೆ. ಕೊಡಗಲ್ಲಿ ಸುಮಾರು ೬,೦೦೦ ಎಕರೆಯಷ್ಟು ಪೈಸಾರಿ ಜಾಗವಿದ್ದು ಇದರ ಬಗ್ಗೆ ಸಮಗ್ರ ಸರ್ವೆ ಮಾಡಿಸಿ ಸರಕಾರದ ಪೈಸಾರಿ ಜಾಗÀವನ್ನು ಕಬಳಿಸಿ ರುವವರಿಂದ ಜಾಗ ತೆರವುಗೊಳಿಸಿ ಬಡವರಿಗೆ ಸೂರು ನಿರ್ಮಿಸಿ ಕೊಡಿ ಎಂದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಸಾರಿ ಜಾಗವನ್ನು ಗುರುತಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಇದನ್ನು ಕಡೆಗಣಿಸಲಾಗಿದೆ. ಇದರ ಬಗ್ಗೆ ಸರಿಯಾದ ಕ್ರಮಕೈಗೊಳ್ಳದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ನಂತರ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಹಾಗೂ ಅಭಿವೃದ್ಧಿ ಅಧಿಕಾರಿ ಪೂರ್ಣಿಮ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಸೂರಿಗಾಗಿ ಸಮರ ಸಮಿತಿ ಅಧ್ಯಕ್ಷ ಅಣ್ಣಪ್ಪ, ಗರಗಂದೂರು ಹೋಬಳಿ ಅಧ್ಯಕ್ಷ ಸೋಮ, ಕಾರ್ಯದರ್ಶಿ ಸಬನಾ, ಹೋಬಳಿ ಸಂಚಾಲಕ ಆನಂದ, ಮಾದಾಪುರ ಸಂಚಾಲಕ ಕೃಷ್ಣ. ಹರದೂರು ಪಂಚಾಯಿತಿ ಕಾರ್ಯದರ್ಶಿ ನವ್ಯ, ಸದಸ್ಯರು ಹಾಜರಿದ್ದರು.