ಗೋಣಿಕೊಪ್ಪಲು, ಮೇ ೨೦: ಭಕ್ತಿ ಪ್ರೊಡಕ್ಷನ್ಸ್ ನಿರ್ಮಾಣದ “ತೇಂಬಾಡ್” ಕೊಡವ ಚಲನಚಿತ್ರ ಗೋಣಿಕೊಪ್ಪದಲ್ಲಿ ಬಿಡುಗಡೆ ಯಾಯಿತು. ಗೋಣಿಕೊಪ್ಪಲುವಿನ ದುರ್ಗಾಬೋಜಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಚಲನಚಿತ್ರ ಬಿಡುಗಡೆ ಕಾರ್ಯಕ್ರಮವನ್ನು ಬ್ರಹ್ಮಗಿರಿ ವಾರಪತ್ರಿಕೆಯ ಡಾಟಿ ಪೂವಯ್ಯ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬ್ರಹ್ಮಗಿರಿ ವಾರ ಪತ್ರಿಕೆಯ ಸಂಪಾದಕ ಉಳ್ಳಿಯಡ ಪೂವಯ್ಯ ಅವರು ಕಳೆದ ೫೦ ವರ್ಷಗಳಿಂದ ಕೇವಲ ೨೬ ಕೊಡವ ಸಿನಿಮಾಗಳು ತೆರೆಕಂಡಿವೆ. ಇತ್ತೀಚಿನ ವರ್ಷಗಳಲ್ಲಿ ಕೊಡವ ಸಿನಿಮಾಗಳು ಹೆಚ್ಚಾಗಿ ತೆರೆಕಾಣುತ್ತಿವೆೆ. ಸಿನಿಮಾವನ್ನು ವೀಕ್ಷಿಸುವುದರ ಮೂಲಕ ಸಮಾಜ ಬಾಂಧವರು ಅದನ್ನು ಬೆಳೆಸಬೇಕು ಎಂದರು.

‘ಶಕ್ತಿ’ಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಮಾತನಾಡಿ ಸಾಂಸ್ಕೃತಿಕವಾಗಿ ಮುಂದೆ ಬರಲು ಸಿನಿಮಾಗಳು ಉಪಯುಕ್ತವಾಗಿವೆÉ. ಚಿತ್ರದ ನಿರ್ದೇಶಕಿ ಗಾನ ಸೋಮಣ್ಣ ಉತ್ತಮಚಿತ್ರ ಬಿಡುಗಡೆಗೊಳಿಸಲು ಶ್ರಮಿಸಿರುವುದು ಚಿತ್ರದಿಂದ ಕಂಡು ಬಂದಿದೆ. ಉತ್ತಮ ಚಿತ್ರ ಕಥೆಯೊಂದಿಗೆ ಸಿನಿಮಾ ತೆರೆ ಕಂಡಿದೆ ಎಂದರು. ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮಾತನಾಡಿ ಕೊಡವ ಸಿನಿಮಾ ಬೆಳವಣಿಗೆಗೆ ನಾಡಿನ ಜನತೆ ಉತ್ತಮ ಬೆಂಬಲ ನೀಡಬೇಕು ಎಂದರು.

ಚಿತ್ರದ ನಿರ್ದೇಶಕಿ ತಡಿಯಂಗಡ ಗಾನ ಸೋಮಣ್ಣ ಮಾತನಾಡಿ, ಸಾಂಸಾರಿಕ ಚಿತ್ರವನ್ನು ನಿರ್ಮಾಣ ಮಾಡಲು ಅನೇಕ ವರ್ಷಗಳು ಹಿಡಿದಿವೆ. ಚಿತ್ರದ ಯಶಸ್ವಿಗೆ ಹಲವು ಮಂದಿ ಕೈ ಜೋಡಿಸಿದ್ದಾರೆ ಎಂದರು.

ಯುಕೋ ಸಂಘಟನೆಯ ಕೊಕ್ಕಲೆಮಾಡ ಮಂಜು ಮಾತನಾಡಿ ಕೊಡಗಿನ ಪುಟ್ಟ ಪ್ರದೇಶದಲ್ಲಿ ಕೊಡವ ಸಿನಿಮಾಗಳನ್ನು ತೆರೆಗೆ ತರುವುದು ಸುಲಭದ ಮಾತಲ್ಲ ಎಂದು ಅಭಿಪ್ರಾಯಿಸಿದರು.

ರಚನಾ ಮೈಸೂರ್ ತೇಂಬಾಡ್ ಚಿತ್ರದ ನಿರ್ಮಾಪಕರಾಗಿದ್ದು ತಡಿಯಂಗಡ ಗಾನ ಸೋಮಣ್ಣ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ತಡಿಯಂಗಡ ಸೋಮಣ್ಣ ಹಾಗೂ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ ಸಹ ನಿರ್ಮಾಪಕರಾಗಿದ್ದು ಸಹಾಯಕ ನಿರ್ದೇಶಕರಾಗಿ ಮಾತಂಡ ದೇಚಮ್ಮ ಅಚ್ಚಯ್ಯ ಹಾಗೂ ಚಮ್ಮಟ್ಟೀರ ಹೃಷಿ ಪಾರ್ವತಿ ಕೆಲಸ ನಿರ್ವಹಿಸಿದ್ದಾರೆ.

ತಡಿಯಂಗಡ ಗಾನ ಸೋಮಣ್ಣ ಕಥೆಗೆ ಮುಕ್ಕಾಟೀರ ಮೌನಿ ನಾಣಯ್ಯ ಹಾಗೂ ನೂರೇರ ಸರಿತಾ ಉತ್ತಯ್ಯ ಚಿತ್ರಕಥೆಯನ್ನು ಬರೆದಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮುಕ್ಕಾಟೀರ ಮೌನಿ ನಾಣಯ್ಯ ಸಾಹಿತ್ಯಕ್ಕೆ ಸಂಗೀತ ನಿರ್ದೇಶಕ ವಿನಯ್ ರಂಗದೂಳ್ ಹಾಗೂ ಮನು ರಾವ್ ಸಂಗೀತ ನೀಡಿದ್ದಾರೆ. ಮುಕ್ಕಾಟೀರ ಮೌನಿ ನಾಣಯ್ಯ ಸಾಹಿತ್ಯದ ಮೂರು ಹಾಡುಗಳಿದ್ದು, ಕೊದಿರಕೂತ್ ಹಾಡನ್ನು ಸಣ್ಣುವಂಡ ನಿಷ್ಮರಕ್ಷಕ್ ಹಾಗೂ ಇನ್ನೆರಡು ಹಾಡುಗಳನ್ನು ಕನ್ನಡ ಕೋಗಿಲೆ ಖ್ಯಾತಿಯ ರಕ್ಷಿತ್ ಪಾಣತ್ತಲೆ ಹಾಡಿದ್ದಾರೆ.

ಕೊಡಗಿನ ಸುಂದರ ಪರಿಸರದಲ್ಲಿ ‘ಆಪ್‌ಟೌನ್’ ಛಾಯಾಗ್ರಹಣ ತಂಡ ಈ ಚಿತ್ರವನ್ನು ಚಿತ್ರೀಕರಿಸಿದ್ದು ಸಂಕಲನಕಾರರಾಗಿ ಜಫ್ಸನ್ ಪಿಂಟೋ ಚಿತ್ರಕ್ಕೆ ಜೀವ ತುಂಬಿದ್ದಾರೆ. ಪ್ರೊಡಕ್ಷನ್ ವಿಭಾಗದಲ್ಲಿ ಸೋಮಣ್ಣ ಚೇಂದೀರ ಸೂರಜ್, ನೆರವಂಡ ಉಮೇಶ್ ಕಾರ್ಯ ನಿರ್ವಹಿಸಿದ್ದಾರೆ.

ನಾಗಿಣಿ ಕನ್ನಡ ಧಾರವಾಹಿ ಖ್ಯಾತಿಯ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಹಿರಿಯ ಕಲಾವಿದರಾದ ವಾಂಚೀರ ನಾಣಯ್ಯ, ಪುಗ್ಗೇರ ವಿಶು, ಆಂಡಮಾಡ ಪವನ್, ಪುಳ್ಳಂಗಡ ಶರಣು ಬೆಳ್ಳಿಯಪ್ಪ, ಮಾದೇಯಂಡ ಸಂಪಿ, ನಂದಿನೆರವAಡ ಅನೂಪ್ ಬೋಪಣ್ಣ, ನಂದಿನೆರವAಡ ಆಕಾಶ್ ಪೆಮ್ಮಯ್ಯ, ನಂದಿನೆರವAಡ ಶರತ್ ಮೇದಪ್ಪ, ಬೊಪ್ಪಂಡ ತಾರಾ, ನಾಳಿಯಂಡ ಶಾಂತಿ, ಚೆನ್ನಪ್ಪಂಡ ಕಲ್ಪನ, ನೆಲ್ಲಚಂಡ ರಿಷಿ, ಮುಕ್ಕಾಟೀರ ಮಂಜು, ಕಟ್ಟೇರ ವಿದ್ಯಾ ಅಯ್ಯಪ್ಪ, ಮುಕ್ಕಾಟೀರ ಮೌನಿ ಬೋಪಣ್ಣ, ಮುಂಡಚಾಡಿರ ರಿನ್ನಿಭರತ್, ನೂರೇರ ಪ್ರಜ್ಞಾ ಪೂವಯ್ಯ, ನೂರೇರ ನಿರನ್‌ಉತ್ತಯ್ಯ, ತಡಿಯಂಗಡ ಆನ್ಯ ಸೋಮಣ್ಣ, ಬಿದ್ದಂಡ ಇಹಾನಿ ದೇವಯ್ಯ, ಚೋಳಂಡ ದೇಶ್ನಾ ದೇಚಮ್ಮ ಮೊದಲಾದ ಕಲಾವಿದರು ನಟಿಸಿದ್ದಾರೆ.

ನೂತನ ಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಹೈಕೋರ್ಟ್ನ ಹಿರಿಯ ವಕೀಲ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಯುಕೊ ಸಂಘಟನೆಯ ಪ್ರಮುಖರಾದ ಕೊಕ್ಕಲೆಮಾಡ ಮಂಜು, ಜಿಲ್ಲಾ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಕೊಲ್ಲೀರ ಧರ್ಮಜ, ಗೋಣಿಕೊಪ್ಪ ವೈದ್ಯಾಧಿಕಾರಿಗಳಾದ ಡಾ. ಗ್ರೀಷ್ಮ ಬೋಜಮ್ಮ, ಹಿರಿಯ ಉದ್ಯಮಿ ಕೊಡಂದೇರ ಸುಬ್ಬಯ್ಯ, ನೆರವಂಡ ಉಮೇಶ್, ತಡಿಯಂಗಡ ಸೌಮ್ಯ, ಚೆಟ್ರುಮಾಡ ಸುಜಯ್ ಬೋಪಯ್ಯ, ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಿತ್ರತಂಡದ ಮುಂಡಚಾಡಿರ ರಿನ್ನಿ ಭರತ್ ಸ್ವಾಗತಿಸಿ, ವಂದಿಸಿದರು ದ.ಕೊಡಗಿನ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.