ಮಡಿಕೇರಿ, ಮೇ ೨೦: ಶೈಕ್ಷಣಿಕ ವರ್ಷ ೨೦೨೧-೨೨ ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮಟ್ಟದಲ್ಲಿ ಕೊಡವ ಭಾಷೆಯನ್ನು ಎರಡನೆಯ ಆಯ್ಕೆ ಭಾಷೆಯಾಗಿ ಅಳವಡಿಸಿದೆ. ಈ ಭಾಷೆಯ ಪಠ್ಯಪುಸ್ತಕಗಳನ್ನು ತಯಾರಿಸಲು ತಜ್ಞರ ಸಮಿತಿ ರಚಿಸಲಾಯಿತು. ಒಟ್ಟು ಐದು ಪುಸ್ತಕಗಳನ್ನು ತಜ್ಞರ ಸಮಿತಿಯು ತಯಾರು ಮಾಡಿದೆ. ಈ ಸಮಿತಿ ಸಿದ್ಧಪಡಿಸಿದ ಪಠ್ಯ ಪುಸ್ತಕಗಳನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಮೂಲಕ ಪ್ರಕಟಣೆ ಮಾಡಲಾಗಿದೆ. ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ನೇತೃತ್ವದಲ್ಲಿ ತಜ್ಞರು ಪುಸ್ತಕ ತಯಾರಿಸಿದ್ದು, ಕೊಡವ ಭಾಷೆಯನ್ನು ಇದೇ ವರ್ಷ ಮೊದಲ ಬಾರಿಗೆ ಕಾವೇರಿ ಕಾಲೇಜು ಗೋಣಿಕೊಪ್ಪದ, ಬಿ.ಬಿ.ಎ ಮತ್ತು ಬಿ.ಸಿ.ಎ. ಪದವಿ ಮಟ್ಟದ ವಿದ್ಯಾರ್ಥಿಗಳು ಆಯ್ಕೆ ಭಾಷೆಯಾಗಿ ಕಲಿಯತ್ತಿದ್ದಾರೆ. ಪ್ರಕಟವಾದ ಪುಸ್ತಕದ ಹೆಸರು ಮತ್ತು ತಯಾರಿ ಮಾಡಿದವರು, ಕಲಾ ಕಾವೇರಿ-೧ ಮುಲ್ಲೇಂಗಡ ಮಧೋಶ್ ಪೂವಯ್ಯ/ ಡಾ. ಉಳ್ಳಿಯಡ ಎಂ.ಪೂವಯ್ಯ, ವಿಜ್ಞಾನ ಕಾವೇರಿ-೧, ನಾಗೇಶ್ ಕಾಲೂರು, ಕಂಪ್ಯೂಟರ್ ಕಾವೇರಿ-೧ ಡಾ.ಮುಲ್ಲೇಂಗಡ ರೇವತಿ ಪೂವಯ್ಯ, ವಾಣಿಜ್ಯ ಕಾವೇರಿ-೧ ಬಾಚರಣಿಯಂಡ.ಪಿ. ಅಪ್ಪಣ್ಣ, ವ್ಯಾವಹಾರ ಕಾವೇರಿ-೧ ಅಜ್ಜನಿಕಂಡ ಮಹೇಶ್ ನಾಚಯ್ಯ. ಪ್ರಕಟವಾದ ಪುಸ್ತಕಗಳನ್ನು ಇತ್ತೀಚೆಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು. ಇದು ಮೊದಲ ಸೆಮಿಸ್ಟರ್‌ನ ಪುಸ್ತಕಗಳಾಗಿದ್ದು, ಬೆಂಗಳೂರಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಭಾಂಗಣದಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿರುವ ಪ್ರೊ.ಪಿ.ಎಸ್.ಯಡಪಡಿತ್ತಾಯ ಈ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕೊಡವ ಭಾಷೆ ಕರ್ನಾಟಕದ ಪ್ರಮುಖ ಭಾಷೆಯಾಗಿದೆ. ಶೈಕ್ಷಣಿಕ ಪ್ರೋತ್ಸಾಹ ದೊರೆತಾಗ ಭಾಷೆ ಬೆಳವಣಿಗೆಯಾಗುತ್ತದೆ ಎಂದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಹಾಗೂ ಸಿಂಡಿಕೇಟ್ ಸದಸ್ಯೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಉಪಸ್ಥಿತರಿದ್ದು, ಶಿಕ್ಷಣದಲ್ಲಿ ಕೊಡವ ಭಾಷೆಯ ಅಳವಡಿಕೆ ಐತಿಹಾಸಿಕ ಮಹತ್ವದ ವಿಚಾರವಾಗಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಕಿಶೋರ್ ಕುಮಾರ್, ಪರೀಕ್ಷಾಂಗ ಕುಲಸಚಿವÀ ಪ್ರೊ. ಪಿ.ಎಲ್. ಧರ್ಮ, ಹಣಕಾಸು ಅಧಿಕಾರಿ ಜಯಪ್ಪ, ಪ್ರಸಾರಾಂಗ ಸಹ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಹಾಗೂ ಎಲ್ಲಾ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.