ಸಿದ್ದಾಪುರ, ಮೇ ೨೦: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನೆಲ್ಲಿಹುದಿಕೇರಿಯ ನಾಗರಿಕರ ಹೋರಾಟ ಸಮಿತಿಯ ವತಿಯಿಂದ ನೆಲ್ಲಿಹುದಿಕೇರಿ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನಾ ಸಭೆಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಪಿ.ಆರ್. ಭರತ್ ಮಾತನಾಡಿ, ನೆಲ್ಲಿಹುದಿಕೇರಿ ಗ್ರಾ.ಪಂ.ಯು ಕಳೆದ ವರ್ಷಗಳಿಂದ ಯಾವುದೇ ವಾರ್ಡ್ ಸಭೆ ಹಾಗೂ ಗ್ರಾಮ ಸಭೆಗಳನ್ನು ನಡೆಸದೇ ನಿರ್ಲಕ್ಷö್ಯ ವಹಿಸುತ್ತಿದೆ ಎಂದು ಆರೋಪಿಸಿದರು.
ಗ್ರಾಮದಲ್ಲಿ ಹಲವಾರು ಮೂಲಭೂತ ಸೌಕರ್ಯಗಳ ಸಮಸ್ಯೆಗಳಿವೆ. ಆದರೆ ಗ್ರಾಮಸ್ಥರ ಸಮಸ್ಯೆಗಳನ್ನು ವಾರ್ಡ್ಸಭೆ ಗ್ರಾಮ ಸಭೆಗಳ ಮುಖಾಂತರ ಪ್ರಸ್ತಾಪಿಸಲು ಅವಕಾಶ ನೀಡದೇ ಪಂಚಾಯಿತಿ ಆಡಳಿತ ಮಂಡಳಿ ರಾಜಕೀಯದಲ್ಲಿ ಕಾಲಹರಣ ಮಾಡುತ್ತಿದೆ ಎಂದು ದೂರಿದರು. ಅಲ್ಲದೇ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ರಸ್ತೆಗಳು ತೀವ್ರವಾಗಿ ಹದಗೆಟ್ಟಿವೆ. ಇದನ್ನು ದುರಸ್ತಿಪಡಿಸುತ್ತಿಲ್ಲವೆಂದರು. ಇತ್ತೀಚೆಗೆ ಕೆಲವು ರಸ್ತೆಗಳ ಕಾಮಗಾರಿಗಳು ಮಾಡಿದ್ದು, ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿದರು. ಕೂಡಲೇ ಮೇಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಮೋಣಪ್ಪ, ಬೀರಾನ್, ಜೋಸ್, ರಾಮಚಂದ್ರ ಇನ್ನಿತರರು ಹಾಜರಿದ್ದರು. ನಂತರ ಮನವಿ ಪತ್ರವನ್ನು ಪಿ.ಡಿ.ಓ. ಅನಿಲ್‌ಕುಮಾರ್ ಅವರಿಗೆ ನೀಡಲಾಯಿತು.