ಕಡಂಗ: ಕಡಂಗ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಸ್ವಾಗತಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಸುಬೀರ್ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯೆ ರಾಣಿ ಗಣಪತಿ, ಗ್ರಾಮದ ವೈದ್ಯಾಧಿಕಾರಿಗಳಾದ ಶೈಲಜಾ, ಎಸ್‍ಡಿಎಮ್‍ಸಿ ಅಧ್ಯಕೆÀ್ಷ ಫಾತಿಮಾ, ಶಾಲಾ ಮುಖ್ಯ ಶಿಕ್ಷಕರಾದ ಶಕುಂತಲಾ ಮತ್ತು ಸಹ ಶಿಕ್ಷಕರು ಹಾಜರಿದ್ದರು.ಮೂರ್ನಾಡು: ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಜ್ಞಾನಜ್ಯೋತಿ ಕೊಡಂಬೂರು, ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ವಿದ್ಯಾರ್ಥಿಗಳಿಗೆ ಹೂವನ್ನು ನೀಡುವುದರ ಮೂಲಕ ಶಿಕ್ಷಕರು ಸ್ವಾಗತಿಸಿ, ವಿದ್ಯಾರ್ಥಿಗಳಿಗೆ ಸಿಹಿಯನ್ನು ಹಂಚಲಾಯಿತು.ಕರಡ: ಕರಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಆರತಿ ಬೆಳಗುವುದರ ಮೂಲಕ ತರಗತಿಗಳಿಗೆ ಸ್ವಾಗತಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ವಿಲಿನ್ ಬೇಪಡಿಯಂಡ, ಎಸ್‍ಡಿಎಂಸಿ ಅಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಜರಿದ್ದರು.ಕೊಡ್ಲಿಪೇಟೆ: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎ. ನಾಗೇಶ್ ಮಕ್ಕಳಿಗೆ ಸಿಹಿ ಹಂಚಿ ಸ್ವಾಗತಿಸಿದರು. ಸದಸ್ಯರು, ಮುಖ್ಯ ಶಿಕ್ಷಕ ಹೆಚ್.ಎನ್. ಮಂಜುನಾಥ್, ಶಿಕ್ಷಕರಾದ ಫಯಾಜ್, ಚೈತ್ರಾ, ಲತಾ, ನವಮಿ, ಕೃಪಾ ಇದ್ದರು.ಮುಳ್ಳೂರು: ಮುಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಸರ್ಕಾರದ ವಿನೂತನ ಕಾರ್ಯಕ್ರಮ ವಿದ್ಯಾ ಪ್ರವೇಶ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶಿಕ್ಷಕ ಸಿ.ಎಸ್. ಸತೀಶ್ ಮಾತನಾಡಿ, 2 ವರ್ಷಗಳ ಕೊರೊನಾ ಹಿನ್ನೆಲೆ ವಿದ್ಯಾರ್ಥಿಗಳಿಗೆ ಆಗಿರುವ ಕಲಿಕಾ ನಷ್ಟವನ್ನು ತುಂಬಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದರು. ಮುಖ್ಯ ಶಿಕ್ಷಕ ಮಂಜುನಾಥ್, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು ಹಾಜರಿದ್ದರು.ಶನಿವಾರಸಂತೆ: ಸಾರ್ವಜನಿಕ ಶಿಕ್ಷಣ ಇಲಾಖೆಯ ಬಹುನಿರೀಕ್ಷಿತ ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಶನಿವಾರಸಂತೆ ಸಮೂಹ ಸಂಪನ್ಮೂಲ ಕೇಂದ್ರದ 8 ಸರ್ಕಾರಿ ಶಾಲೆಗಳು ತಳಿರುತೋರಣಗಳಿಂದ ಸಿಂಗಾರಗೊಂಡಿದ್ದವು. ಶತಮಾನದ ಹಿಂದಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಉತ್ಸಾಹದಿಂದ ಬಂದ ಮಕ್ಕಳಿಗೆ ಹೂಗುಚ್ಛ ನೀಡಿ, ಸಿಹಿ ಹಂಚಿ ಸಂಭ್ರಮದಿಂದ ಸ್ವಾಗತಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಎ.ಟಿ. ಜಾಕ್ಲಿನ್ ಮಾತನಾಡಿದರು. ಶಿಕ್ಷಕರು, ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟವನ್ನು ಸವಿದು ಶಾಲಾರಂಭವನ್ನು ಸಂಭ್ರಮಿಸಿದರು.
ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಮಕ್ಕಳನ್ನು ಹೂ ನೀಡಿ ಸ್ವಾಗತಿಸಲಾಯಿತು. ಸಿಆರ್‍ಪಿ ದಿನೇಶ್, ಮುಖ್ಯ ಶಿಕ್ಷಕ ಪುಟ್ಟಸ್ವಾಮಿ, ಶಿಕ್ಷಕರು, ಪ್ರೌಢಶಾಲಾ ಶಿಕ್ಷಕ ರಂಗಸ್ವಾಮಿ ಸ್ವಾಗತಿಸಿದರು.
ಬ್ಯಾಂಡ್‍ಸೆಟ್ ಸಹಿತ ಸ್ವಾಗತ
ಶನಿವಾರಸಂತೆಯ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಸಂಭ್ರಮದಿಂದ ಶಾಲೆಗೆ ಹಾಜರಾದ ವಿದ್ಯಾರ್ಥಿನಿಯರನ್ನು ಬ್ಯಾಂಡ್ ಸೆಟ್ ಸಹಿತ ಹೂ ನೀಡಿ ಸ್ವಾಗತಿಸಲಾಯಿತು. ಮುಖ್ಯಶಿಕ್ಷಕ ಶಿವಪ್ರಕಾಶ್, ಶಿಕ್ಷಕರು ಹಾಜರಿದ್ದರು.