ಮಡಿಕೇರಿ, ಮೇ 19: ವಾಡಿಕೆಯಂತೆ ಎಲ್ಲವೂ ಸಹಜವಾಗಿದ್ದಲ್ಲಿ ಇಂದು ಕೊಡಗು ಜಿಲ್ಲೆಯಲ್ಲಿ ಬೇಸಿಗೆಯ ಪರ್ವಕಾಲವಾಗಿರಬೇಕಿತ್ತು. ಮೇ ತಿಂಗಳ ಮೂರನೇ ವಾರದ ವೇಳೆಗೆ ಸುಡುಬಿಸಿಲಿನ ವಾತಾವರಣ ಕಾಣಬೇಕಾಗಿದ್ದ ಜಿಲ್ಲೆ ಪ್ರಸಕ್ತ ವರ್ಷ ಮುಂಗಾರು ಮಳೆ ಆರಂಭಕ್ಕೆ ಮುಂಚಿತವಾಗಿಯೇ ನೈಜ ಮಳೆಗಾಲದ ಚಿತ್ರಣವನ್ನು ಎದುರಿಸುತ್ತಿದೆ. ವಾತಾವರಣದಲ್ಲಿನ ಅಸಹಜತೆಯಿಂದಾಗಿ ರಾಜಧಾನಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕೊಡಗು ಜಿಲ್ಲೆಯೂ ಇದರಿಂದ ಹೊರತಾಗಿಲ್ಲ. ಕಳೆದ ಒಂದು ವಾರದ ಅವಧಿಯಿಂದಲೇ ವಾಯುಭಾರ ಕುಸಿತದಿಂದಾಗಿ ಮಳೆಗೆ ಮೈಯೊಡ್ಡಿರುವ ಜಿಲ್ಲೆಯಲ್ಲಿ ಮಳೆ ಮತ್ತೂ ಮುಂದುವರಿಯುತ್ತಿದೆ. ವಾಡಿಕೆಯಂತೆ ಜಿಲ್ಲೆಯಲ್ಲಿ ಮುಂಗಾರು ಪ್ರವೇಶಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಾಲಿನಲ್ಲಿ ಮೇ 27ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂಬ ಮುನ್ಸೂಚನೆ ಹವಾಮಾನ ಇಲಾಖೆಯಿಂದ ದೊರೆತಿದೆ. ಈಗಿನ ವಾತಾವರಣ ಇನ್ನು ಕೆಲ ದಿನ ಮುಂದುವರಿದಲ್ಲಿ ಮುಂಗಾರು ಆರಂಭದ ದಿನ ಸಮೀಪವಾಗುತ್ತಿರುವುದರಿಂದ ಜಿಲ್ಲೆ ಈಗಿನಿಂದಲೇ ಮಳೆಗಾಲದ ಅನುಭವವನ್ನು ಎದುರಿಸಬೇಕಾಗುತ್ತದೆ. ಪ್ರಸ್ತುತದ ವಾತಾವರಣ ಮಳೆಗಾಲದ ಮಾದರಿಯಲ್ಲೇ ಕಂಡುಬರುತ್ತಿದ್ದು, ನಿರಂತರ ಮಳೆಯೊಂದಿಗೆ ಅಲ್ಲಲ್ಲಿ ನೀರಿನ ಮಟ್ಟದಲ್ಲಿ ಏರಿಕೆ... ಮರಗಳು ಧರೆಗುರುಳುವುದು, ವಿದ್ಯುತ್ ವ್ಯತ್ಯಯ, ವಾಹನ ಅವಘಡಗಳಂತಹ ಪ್ರಕರಣಗಳು, ಕೃಷಿ ಫಸಲಿಗೆ ಧಕ್ಕೆ ಇತ್ಯಾದಿ ಅಂಶಗಳು ವರದಿಯಾಗುತ್ತಿವೆ. ಭಾಗಮಂಡಲ - ತಲಕಾವೇರಿ ಸೇರಿದಂತೆ ಎಲ್ಲೆಡೆ (ಮೊದಲ ಪುಟದಿಂದ) ನಿರಂತರ ಮಳೆ ಸುರಿಯುತ್ತಿರುವುದರಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಬೇತ್ರಿ, ನಾಪೋಕ್ಲು, ಸಿದ್ದಾಪುರ, ಕರಡಿಗೋಡು ಕಡೆಯಲ್ಲಿ ಕಾವೇರಿ ನೀರು ಏರಿಕೆಯಾಗಿದ್ದು, ಹಾರಂಗಿ ಜಲಾಶಯ ಮೇ 20ರ ವೇಳೆಗೆ ಭರ್ತಿಯಾಗುವತ್ತ ಸಾಗುತ್ತಿದೆ.

ಜಿಲ್ಲೆಯ ಹಲವೆಡೆಗಳಲ್ಲಿ ಕೆಲವಾರು ಹಾನಿಗಳೂ ಸಂಭವಿಸುತ್ತಿವೆ. ಹಲವೆಡೆ ಬರೆ - ರಸ್ತೆಗಳು, ಆಯಕಟ್ಟಿನ ಸ್ಥಳದಲ್ಲಿರುವ ಮನೆಗಳು ಅಪಾಯದ ಭೀತಿ ಎದುರಿಸುವಂತಾಗಿವೆ.

ಹಾರಂಗಿ ಜಲಾಶಯ ಭರ್ತಿಯತ್ತ

ಹಾರಂಗಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗುವತ್ತ ಸಾಗುತ್ತಿದೆ. 2859 ಅಡಿ ಎತ್ತರದ ಜಲಾಶಯದಲ್ಲಿ ತಾ. 19ರಂದು ಬೆಳಿಗ್ಗೆ ವೇಳೆಗೆ 2849.60 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಹಾರಂಗಿಯಲ್ಲೇ 4 ಇಂಚು ಅಧಿಕ ಮಳೆ 24 ಗಂಟೆಯ ಅವಧಿಯಲ್ಲಾಗಿದೆ. ಜಲಾಶಯಕ್ಕೆ 3285 ಕ್ಯೂಸೆಕ್ಸ್ ನೀರಿನ ಒಳಹರಿವು ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರ ಸೂಚನೆಯಂತೆ ಜಲಾಶಯದಿಂದ ನದಿಗೆ ನೀರು ಬಿಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ನದಿ ಅಂಚಿನಲ್ಲಿರುವ ಜನ- ಜಾನುವಾರುಗಳ ಸುರಕ್ಷತೆಗೆ ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.

ಸರಾಸರಿ 3 ಇಂಚು ಮಳೆ

ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮತ್ತೆ ಸರಾಸರಿ 3 ಇಂಚಿನಷ್ಟು ಮಳೆಯಾಗಿದೆ. ತಾ. 18ರಂದು ಸರಾಸರಿ 2 ಇಂಚಾಗಿದ್ದರೆ, ತಾ. 19ರಂದು ಈ ಪ್ರಮಾಣ ಮತ್ತೆ ಒಂದು ಇಂಚಿನಷ್ಟು ಹೆಚ್ಚಾಗಿದೆ.

ಜಿಲ್ಲೆಯ ಮಳೆ ವಿವರ

ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯಲ್ಲಿ ಜಿಲ್ಲೆಗೆ ಸರಾಸರಿ ಅಂದಾಜು 3 ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 3.17, ವೀರಾಜಪೇಟೆ ತಾಲೂಕಿನಲ್ಲಿ 1.45, ಸೋಮವಾರಪೇಟೆ ತಾಲೂಕಿನಲ್ಲಿ 4 ಇಂಚಿನಷ್ಟು ಸರಾಸರಿ ಮಳೆಯಾಗಿದೆ.

ಶನಿವಾರಸಂತೆಗೆ 5 ಇಂಚು

ಶನಿವಾರಸಂತೆ ಹೋಬಳಿಯಲ್ಲಿ 24 ಗಂಟೆಯಲ್ಲಿ 5 ಇಂಚಿನಷ್ಟು ಭಾರೀ ಮಳೆಯಾಗಿದೆ. ಶಾಂತಳ್ಳಿಯಲ್ಲಿ 4.60, ಸುಂಟಿಕೊಪ್ಪ 4.68 ಇಂಚು ಮಳೆಯಾಗಿದೆ. ಉಳಿದಂತೆ ಮಡಿಕೇರಿ ಕ.ಸ.ಬಾ.ದಲ್ಲಿ 3.60, ನಾಪೋಕ್ಲು 2.31, ಸಂಪಾಜೆ 3.82, ಭಾಗಮಂಡಲ ಹೋಬಳಿಯಲ್ಲಿ 3.08 ಇಂಚಿನಷ್ಟು ಮಳೆ ಬಿದ್ದಿದೆ.

ಸೋಮವಾರಪೇಟೆ ಕ.ಸ.ಬಾ. 3.39, ಕೊಡ್ಲಿಪೇಟೆ 2.64, ಕುಶಾಲನಗರ 3.91 ಇಂಚು ಮಳೆಯಾಗಿದೆ. ವೀರಾಜಪೇಟೆ ಕ.ಸ.ಬಾ. 2.36, ಹುದಿಕೇರಿ1, ಶ್ರೀಮಂಗಲ 1.10, ಪೊನ್ನಂಪೇಟೆ 1.62, ಅಮ್ಮತ್ತಿ 1.84, ಬಾಳೆಲೆ ಹೋಬಳಿಯಲ್ಲಿ 1 ಇಂಚು ಮಳೆಯಾಗಿದೆ.ಸೋಮವಾರಪೇಟೆ : ತಾಲೂಕಿನಾದ್ಯಂತ ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಶಾಲಾ ಕಾಲೇಜುಗಳು ಅವಧಿಗೂ ಮುನ್ನವೇ ಆರಂಭವಾಗಿರುವ ಸಮಯದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ವಿದ್ಯಾರ್ಥಿಗಳು ತರಗತಿಗಳಿಗೆ ತೆರಳಲು ಅನಾನುಕೂಲವಾಗಿದೆ.

ಇದರೊಂದಿಗೆ ಕೃಷಿ ಕಾರ್ಯಕ್ಕೂ ತೊಡಕಾಗಿದ್ದು, ಗದ್ದೆ ಹಾಗೂ ತೋಟ ಕೆಲಸಗಳು ಸ್ಥಗಿತಗೊಂಡಿವೆ. ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿಗಳು ಸ್ಥಗಿತಗೊಂಡಿವೆ. ಧಾರಾಕಾರ ಮಳೆಯಾಗುತ್ತಿರುವುದರಿಂದ ವಾತಾವರಣ ಶೀತಗೊಂಡಿದ್ದು, ಚಳಿಯ ತೀವ್ರತೆ ಹೆಚ್ಚುತ್ತಿದೆ.

ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಅಧಿಕವಾಗುತ್ತಿದ್ದು, ಅಲ್ಲಲ್ಲಿ ಮರಗಳು ಬೀಳುತ್ತಿವೆ. ಗ್ರಾಮೀಣ ಪ್ರದೇಶದ ರಸ್ತೆಗಳು ಮಳೆಗೆ ಹಾಳಾಗುತ್ತಿದ್ದು, ವಾಹನಗಳ ಸಂಚಾರದಿಂದ ಗುಂಡಿ ಬೀಳುತ್ತಿವೆ. ಇಲ್ಲಿನ ಆಲೇಕಟ್ಟೆ ರಸ್ತೆಯಲ್ಲಿ ಕಾಂಕ್ರೀಟೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಬಸ್ ಸೇರಿದಂತೆ ಇತರ ವಾಹನಗಳು ಬದಲಿ ಮಾರ್ಗದಲ್ಲಿ ಚಲಿಸುತ್ತಿವೆ. ಇದರಿಂದಾಗಿ ಚೌಡ್ಲು-ಹಾನಗಲ್ಲು ವ್ಯಾಪ್ತಿಯ ಗ್ರಾಮೀಣ ರಸ್ತೆಗಳು ಹಾಳಾಗುತ್ತಿವೆ.

ಭಾರೀ ಮಳೆಯಾಗುತ್ತಿರುವುದರಿಂದ ತಾಲೂಕಿನ ಸಣ್ಣಪುಟ್ಟ ಕೆರೆಕಟ್ಟೆಗಳು, ನದಿ ತೊರೆಗಳು, ಹೊಳೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಪಟ್ಟಣದ ಕಕ್ಕೆಹೊಳೆ, ಐಗೂರು ಚೋರನ ಹೊಳೆ, ಹಾನಗಲ್ಲು ದುದ್ದುಗಲ್ಲು ಹೊಳೆಗಳಲ್ಲಿ ನೀರಿನ ಹರಿವು ಅಧಿಕವಾಗುತ್ತಿದೆ.

ನಿರಂತರವಾಗಿ ಭಾರೀ ಮಳೆಯಾಗುತ್ತಿರುವುದರಿಂದ ಗದ್ದೆ ಹಾಗೂ ಕಾಫಿ ತೋಟದ ಕೆಲಸಗಳು ಸ್ಥಗಿತಗೊಂಡಿವೆ. ಗದ್ದೆಗಳಲ್ಲಿ ಬೆಳೆದಿರುವ ಕಾಯಿ ಮೆಣಸು, ಶುಂಠಿ ಸೇರಿದಂತೆ ಇನ್ನಿತರ ಬೆಳೆಗಾರರಿಗೆ ಈಗಿನ ಮಳೆ ಸಮಸ್ಯೆ ತಂದೊಡ್ಡಿದೆ. ಗದ್ದೆಗಳಲ್ಲಿ ನೀರು ಶೇಖರಣೆಯಾಗಿರುವುದರಿಂದ ಬೆಳೆ ಕೊಳೆಯುವ ಆತಂಕ ಎದುರಾಗಿದೆ.

ಮಲೆನಾಡು ಹಾಗೂ ಬಯಲು ಸೀಮೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 5 ಇಂಚು ಮಳೆ ಸುರಿದಿದೆ. ಶಾಂತಳ್ಳಿ, ಕುಂದಳ್ಳಿ, ಕುಡಿಗಾಣ, ಕೊತ್ನಳ್ಳಿ, ಬೀಕಳ್ಳಿ, ಬೆಂಕಳ್ಳಿ, ನಾಡ್ನಳ್ಳಿ, ತಡ್ಡಿಕೊಪ್ಪ, ಮಲ್ಲಳ್ಳಿ, ತೋಳೂರುಶೆಟ್ಟಳ್ಳಿ, ಕೂತಿ, ಎಡದಂಟೆ, ತಾಕೇರಿ, ಕಿರಗಂದೂರು ಭಾಗದಲ್ಲಿ ಭಾರೀ ಮಳೆಗೆ ಕಾಫಿ ತೋಟದ ಕೆಲಸಗಳು ಸ್ಥಗಿತಗೊಂಡಿವೆ.

ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲೂ ದಿನದ 24ಗಂಟೆಯೂ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ಕಸಾಬ ಹೋಬಳಿ ವ್ಯಾಪ್ತಿಯಲ್ಲಿ 84.8. ಮಿ.ಮೀ., ಕೊಡ್ಲಿಪೇಟೆ 66, ಶನಿವಾರಸಂತೆ 126, ಶಾಂತಳ್ಳಿಗೆ 115 ಮಿ.ಮೀ. ಮಳೆಯಾಗಿದೆ.

ಕಂಟ್ರೋಲ್ ರೂಂ ಸ್ಥಾಪನೆ: ತಾಲೂಕು ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಯಾವುದೇ ಹಾನಿ ಘಟನೆಗಳು ಸಂಭವಿಸಿದರೆ ತಕ್ಷಣ ತಾಲೂಕು ಕಚೇರಿಯಲ್ಲಿರುವ ಕಂಟ್ರೋಲ್ ರೂಂ (ದೂ:08276 282045) ಗೆ ಮಾಹಿತಿ ನೀಡಬೇಕೆಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ಮನವಿ ಮಾಡಿದ್ದಾರೆ.

ಆಸ್ತಿ ಪಾಸ್ತಿ ಹಾನಿ ಸೇರಿದಂತೆ ಇನ್ನಿತರ ವಿಕೋಪಗಳು ಸಂಭವಿಸಿದರೆ ತಕ್ಷಣ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿದರೆ ಶೀಘ್ರವಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆ ಸಾರ್ವಜನಿಕರು ತಾಲೂಕು ಆಡಳಿತದೊಂದಿಗೆ ಸಹಕರಿಸಬೇಕೆಂದು ತಿಳಿಸಿದ್ದಾರೆ.ಸಿದ್ದಾಪುರ: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ದುಬಾರೆ ಹಾಡಿಯಲ್ಲಿ ಬುಧವಾರ ಗಾಳಿ-ಮಳೆಗೆ ಒಣಗಿದ ಮರವೊಂದು ಹಾಡಿಯ ನಿವಾಸಿ ಸಣ್ಣಕ್ಕ ಲೀಲಾವತಿ ಎಂಬವರ ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಭಾಗಶಃ ಹಾನಿಗೊಳಗಾಗಿದೆ. ಅದೃಷ್ಟವಶಾತ್ ಮನೆಯವರು ಪಕ್ಕದ ಮನೆಯಲ್ಲಿ ವಾಸ ಮಾಡಿದ್ದರು. ಇದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಲೆಕ್ಕಿಗ ಓಮಪ್ಪ ಬಣಾಕರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು.

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಈ ರೀತಿ ಮಳೆ ಮುಂದುವರಿದಲ್ಲಿ ನದಿ ತೀರದ ನಿವಾಸಿಗಳಿಗೆ ಪ್ರವಾಹ ಭೀತಿ ಎದುರಾಗುವ ಸಾಧ್ಯತೆ ಕಂಡುಬಂದಿದೆ.

ನದಿ ತೀರದ ನಿವಾಸಿಗಳಿಗೆ ನೋಟೀಸ್: ಮಳೆ ಆರಂಭವಾಗಿದ್ದು ಮುಂದಿನ ತಿಂಗಳಿನಿಂದ ಮುಂಗಾರು ಮಳೆ ಪ್ರಾರಂಭವಾಗಿ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಲು ಮುಂಜಾಗ್ರತಾ ಕ್ರಮವಾಗಿ ಅಮ್ಮತ್ತಿ ಹೋಬಳಿ ನಾಡ ಕಚೇರಿಯ ವ್ಯಾಪ್ತಿಯ ಒಳಪಡುವ ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ, ಕೊಂಡಂಗೇರಿ ಭಾಗದ ನದಿ ತೀರದ ನಿವಾಸಿಗಳಿಗೆ ಮುಂದಿನ ವಾರದಿಂದ ನೋಟೀಸ್ ಜಾರಿ ಮಾಡಲಾಗುವುದೆಂದು ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ತಿಳಿಸಿದ್ದಾರೆ. ವೀರಾಜಪೇಟೆ ತಾಲೂಕು ತಹಶೀಲ್ದಾರ್ ಡಾ. ಯೋಗಾನಂದ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.ನಾಪೆÇೀಕ್ಲು : ಜನವರಿ ತಿಂಗಳಿನಿಂದ ಇದುವರೆಗೆ ನಾಪೆÇೀಕ್ಲು ವಿಭಾಗಕ್ಕೆ 14.85 ಇಂಚು ಮಳೆಯಾಗಿದೆ. ಮಾರ್ಚ್ ತಿಂಗಳಲ್ಲಿ 2.75 ಇಂಚು, ಏಪ್ರಿಲ್ ತಿಂಗಳಲ್ಲಿ 4.60 ಮತ್ತು ಮೇ ತಿಂಗಳಲ್ಲಿ 7.50 ಇಂಚು ಮಳೆಯಾಗಿದೆ. ಕಳೆದ 5 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕಾಫಿ ತೋಟಗಳಲ್ಲಿ ಮರಗಳು ಬಿದ್ದು ನಷ್ಟ ಸಂಭವಿಸಿದೆ. ನಿನ್ನೆ ಸುರಿದ ಭಾರೀ ಮಳೆಗೆ ನಾಲಡಿ ಗ್ರಾಮದ ಪರದಂಡ ಸುಬ್ರಮಣಿ ಅವರ ಲೈನ್ ಮನೆಯ ಮೇಲೆ ಮರ ಬಿದ್ದು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮಲೆಕ್ಕಿಗ ಜನಾರ್ಧನ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಚೆಟ್ಟಳ್ಳಿ : ಕಳೆದ ನಾಲ್ಕು ದಿನಗಳಿಂದ ಸುರಿದ ಮಳೆಗೆ ಚೆಟ್ಟಳ್ಳಿ-ಮಡಿಕೇರಿ ರಸ್ತೆ ಬದಿಯ ಮಣ್ಣು ಕುಸಿದಿದ್ದ ಪರಿಣಾಮ ಬಸ್ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಕಳೆದೆರಡು ವರ್ಷಗಳ ಅತಿವೃಷ್ಟಿಯಿಂದ ಚೆಟ್ಟಳ್ಳಿಯಿಂದ ಮಡಿಕೇರಿಗೆ ತೆರಳುವ ಇಕ್ಕೆಲಗಳಲ್ಲಿ ಬರೆ ಕುಸಿಯುವ ಅಪಾಯದ ಅಂಚಿನಲ್ಲಿದ್ದು ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಕೆಲವೆಡೆ ತಡೆಗೋಡೆ ಕಾಮಗಾರಿ ಹಂತದಲ್ಲೆ ಕುಸಿದರೆ ಮತ್ತೆ ಕೆಲವೆಡೆ ಕಾಮಗಾರಿ ಅಪೂರ್ಣಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ನಿರಂತರ ಸುರಿದ ಮಳೆಗೆ ತಡೆಗೋಡೆ ಕಾಮಗಾರಿಗೆ ಹಾಕಲಾದ ಮಣ್ಣು ಕುಸಿತ ಜೊತೆಗೆ ರಸ್ತೆ ಬದಿ ಬಿರುಕು ಉಂಟಾಗಿ ಅಪಾಯಕಾರಿಯಾಗಿದೆ.

ಬಸ್ ಸಂಚಾರ ಸ್ಥಗಿತ: ಅಪಾಯಕಾರಿ ರಸ್ತೆಯಲ್ಲಿ ಸಣ್ಣ ವಾಹನಗಳು ಚಲಿಸುತ್ತಿದ್ದು ಬಸ್ ಸಂಚರಿಸಲಾಗದೆ ಸ್ಥಗಿತಗೊಂಡಿತು. ಬೆಳಗ್ಗಿನಿಂದಲೆ ಬಸ್ ಸಂಚಾರವಿಲ್ಲದ ಪರಿಣಾಮ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಯಿತು.

ಮಣ್ಣು ಕುಸಿತದ ಸ್ಥಳದಲ್ಲಿ ತಾತ್ಕಾಲಿಕ ಕಾಮಗಾರಿ: ರಸ್ತೆ ಬದಿಯ ಮಣ್ಣು ಕುಸಿತದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಜೆಸಿಬಿ ಯಂತ್ರದ ಮೂಲಕ ಮಣ್ಣಿನ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ವಾಹನ ಸಂಚಾರಕ್ಕೆ ಅನುವುಮಾಡಿಕೊಡಲಾಗಿದೆ. ಇನ್ನು ಉಳಿದ ಜಾಗದಲ್ಲಿ ಜೆಸಿಬಿಯಿಂದ ಮಣ್ಣು ಹಾಕುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ.

ಮಳೆಗಾಲ ಪ್ರಾರಂಭದ ಮೊದಲೇ ಚೆಟ್ಟಳ್ಳಿ-ಮಡಿಕೇರಿ ರಸ್ತೆ ಅಪಾಯಕಾರಿಯಾಗಿದ್ದು, ಅವೈಜ್ಞಾನಿಕ ತಡೆಗೋಡೆ ಕಾಮಗಾರಿ ಹಾಗೂ ಬರೆಗಳ ಕೊರೆತದಿಂದ ಮುಂಬರುವ ಮಳೆಗಾಲದಲ್ಲಿ ರಸ್ತೆಗಳು ಅಪಾಯಕಾರಿಯಾಗಲಿದೆಯೆಂದು ಸಾರ್ವಜನಿಕರ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.ಕಣಿವೆ: ಜಿಲ್ಲೆಯ ಕಿರಿದಾದ ಜಲಾಶಯ ಚಿಕ್ಲಿಹೊಳೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮೈದುಂಬಿದೆ.

ಜಲಾಶಯದ ಹೆಚ್ಚುವರಿ ನೀರು ವೃತ್ತಾಕಾರದ ಸುರುಳಿಯ ಮೂಲಕ ಹೊರಸೂಸುತ್ತಿದೆ. ಜಲಾಶಯದ ಈ ವೈಭವ ನೋಡುಗರ ಕಣ್ಮನ ತಣಿಸುತ್ತಿದೆ. ಹಾಗಾಗಿ ಜಲಾಶಯಕ್ಕೆ ಪ್ರವಾಸಿಗರ ದಂಡು ಧಾವಿಸುತ್ತಿದೆ.

ಪೊನ್ನಂಪೇಟೆ : ದಕ್ಷಿಣ ಕೊಡಗಿನಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಳವಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಪೊನ್ನಂಪೇಟೆಯಲ್ಲಿ 2 ಇಂಚು, ಬೇಗೂರುವಿನಲ್ಲಿ 1.66 ಇಂಚು, ಬಿ. ಶೆಟ್ಟಿಗೇರಿಯಲ್ಲಿ 1.3 ಇಂಚು ಮಳೆಯಾಗಿದೆ. ಮಳೆಯಿಂದ ಸಂಭವಿಸಿರುವ ಹಾನಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ‘ಶಕ್ತಿ’ಯೊಂದಿಗೆ ಪೊನ್ನಂಪೇಟೆ ತಹಶೀಲ್ದಾರ್ ವಿ. ಪ್ರಶಾಂತ್ ಕುಮಾರ್ ಮಾತನಾಡಿ, ಇತ್ತೀಚೆಗೆ ಸುರಿದ ಮಳೆಗೆ 7 ಮನೆಗಳಿಗೆ ಹಾನಿಯಾಗಿದೆ. ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ತಾ. 17 ರಂದು ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಟಾಸ್ಕ್‍ಫೋರ್ಸ್ ಸಭೆ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಎಲ್ಲಾ ಅಧಿಕಾರಿಗಳಿಗೂ ನಿರ್ದೇಶನ ನೀಡಿದ್ದಾರೆ. ಚರಂಡಿಗಳ ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿಗಳಿಗೆ ಅಗತ್ಯ ವಸ್ತು ಕೊಂಡುಕೊಳ್ಳಲು 50 ಸಾವಿರ ರೂಪಾಯಿ ಹಣವನ್ನು ಮಂಜೂರು ಮಾಡಲಾಗಿದ್ದು, ತುರ್ತು ಸಂದರ್ಭಗಳನ್ನು ಎದುರಿಸಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಯಂಸೇವಕರ ತಂಡವನ್ನು ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಗೋಣಿಕೊಪ್ಪಲು: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆ - ಗಾಳಿಗೆ ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗದಲ್ಲಿ ಮನೆಗಳಿಗೆ ಹಾನಿ ಸಂಭವಿಸಿದೆ. ಇಲ್ಲಿಯತನಕ ಪೊನ್ನಂಪೇಟೆಯ 4, ಅರುವತ್ತೋಕ್ಲು 1, ಬಲ್ಯಮಂಡೂರು 2, ಮನೆಗಳಿಗೆ ತೊಂದರೆ ಆಗಿದೆ. ಮಾಹಿತಿ ತಿಳಿದ ಪೊನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.

ವಿಪರೀತ ಚಳಿ ಕಾಣಿಸಿಕೊಂಡಿದ್ದು, ನಾಗರಿಕರು ನಗರದಲ್ಲಿ ತಮಗೆ ಬೇಕಾದ ಉಡುಪು ಹಾಗೂ ಮಳೆಗೆ ಬೇಕಾದ ಛತ್ರಿಯನ್ನು ಖರೀದಿಸುವಲ್ಲಿ ತೊಡಗಿದ್ದರು. ದಕ್ಷಿಣ ಕೊಡಗಿನ ವಿವಿಧ ಭಾಗದಲ್ಲಿ ವಿದ್ಯುತ್ ಕಂಬಗಳು ಮಳೆ-ಗಾಳಿಗೆ ಹಾನಿ ಆಗಿವೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಚಾರದಲ್ಲಿ ವ್ಯತ್ಯಾಸ ಉಂಟಾಗಿತ್ತು. ರಾತ್ರಿಯಿಂದ ಸುರಿಯುತ್ತಿದ್ದ ಮಳೆ ಬುಧವಾರ ಮಧ್ಯಾಹ್ನದ ವೇಳೆ ಕೊಂಚ ಬಿಡುವು ನೀಡಿತ್ತು. ಗೋಣಿಕೊಪ್ಪ ಮಾರ್ಗವಾಗಿ ಹರಿಯುತ್ತಿರುವ ಕೀರೆ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ. ಮಳೆ ಹಿನೆÀ್ನಲೆಯಲ್ಲಿ ಪಟ್ಟಣಕ್ಕೆ ಅಷ್ಟಾಗಿ ಜನರು ಆಗಮಿಸಿರಲಿಲ್ಲ. ಇದರಿಂದಾಗಿ ಖಾಸಗಿ ಬಸ್‍ನಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.ಗುಡ್ಡೆಹೊಸೂರು : ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನೆÀ್ನಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ. ಮಳೆ ಹೆಚ್ಚಾದಲ್ಲಿ ನದಿಯಂಚಿನಲ್ಲಿರುವ ಪಂಪ್ ಹೌಸ್‍ಗಳು ನೀರಿನಲ್ಲಿ ಮುಳುಗುವ ಭೀತಿಯಲ್ಲಿ ಕೆಲವು ರೈತರಿದ್ದಾರೆ. ಮುಂಗಾರು ಪ್ರಾರಂಭಕ್ಕಿಂತ ಮೊದಲು ಕಾವೇರಿ ನದಿಯಲ್ಲಿ ಇಷ್ಟೊಂದು ನೀರು ಹೆಚ್ಚಾಗಬಹುದೆಂದು ಯಾರೂ ಭಾವಿಸಿರಲಿಲ್ಲ. ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾದಲ್ಲಿ ಕಾವೇರಿಯಲ್ಲಿ ಮತ್ತೆ ಏರಿಕೆಯಾಗಲಿದೆ. ಈ ಭಾಗದಲ್ಲಿ ಹಳ್ಳಕೊಳ್ಳಗಳು, ಕೆರೆಗಳು ತುಂಬಿಹರಿಯುತ್ತಿವೆ. ಈ ಭಾಗದ ರೈತರು ಗದ್ದೆ ಉಳುಮೆ ಮಾಡಿ ಭತ್ತದ ಸಸಿಮಡಿ ತಯಾರು ಮಾಡುವ ಕಾರ್ಯದಲ್ಲಿ ತಯಾರಾಗಿದ್ದಾರೆ.ಹಾರಂಗಿಯಿಂದ ಸದ್ಯಕ್ಕೆ ನೀರು ಬಿಡುವುದಿಲ್ಲ

ಮಡಿಕೇರಿ: ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಪ್ರಮಾಣಕ್ಕೆ ತಲುಪಲು ಇನ್ನೂ 10 ಅಡಿ ಬಾಕಿ ಇದೆ. ಆದುದರಿಂದ ಸದ್ಯಕ್ಕೆ ಮುಖ್ಯ ದ್ವಾರದಿಂದ ನೀರು ಬಿಡುವುದಿಲ್ಲವೆಂದು ಹಾರಂಗಿ ಜಲಾಶಯ ಯೋಜನೆಯ ಮುಖ್ಯ ಇಂಜಿನಿಯರ್ ಚೆನ್ನಕೇಶವ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ನಾವು ಸದ್ಯದ ಮಟ್ಟಿಗೆ ಹಾರಂಗಿ ವಿದ್ಯುತ್ ಉತ್ಪಾದನಾ ಘಟಕ ಕೇಂದ್ರಕ್ಕೆ ಹೊರ ಮಾರ್ಗದ ಮೂಲಕ 600 ಕ್ಯೂಸೆಕ್ಸ್‍ಗಳಷ್ಟು ನೀರನ್ನು ಬಿಡಲು ಪ್ರಾರಂಭಿಸಿದ್ದೇವೆ. ಇದರಿಂದ ಜಲಾಶಯದಲ್ಲಿ ನೀರಿನ ಒತ್ತಡ ಕಡಿಮೆಯಾಗುತ್ತದೆ. ಸಂದರ್ಭಾನುಸಾರ ನೋಡಿಕೊಂಡು ಕೃಷಿಕರಿಗೆ ನೀರಾವರಿಗೆ ಅಗತ್ಯ ನೀರನ್ನು ಮುಂಗಾರು ಸಂದರ್ಭದಲ್ಲಿ ಹೊರ ಬಿಡಲಾಗುತ್ತದೆ ಎಂದು ಅವರು ಮಾಹಿತಿಯಿತ್ತರು.

ಹಾರಂಗಿ ಅಣೆಕಟ್ಟು ವಿಭಾಗದ ಸಹಾಯಕ ಇಂಜಿನಿಯರ್ ಸಿದ್ದರಾಜ್ ಶೆಟ್ಟಿ ಅವರು ‘ಶಕ್ತಿ’ಯೊಂದಿಗೆ ಮಾತನಾಡಿ, ಇಂದಿನ ಮಟ್ಟಿಗೆ ಜಲಾಶಯದಲ್ಲಿ ನೀರಿನ ಮಟ್ಟ ನಿಯಂತ್ರಣದಲ್ಲಿದೆ. ವಿದ್ಯುತ್ ಘಟಕಕ್ಕೆ ನೀರು ಬಿಡಲಾಗುತ್ತಿದೆ. ತಾತ್ಕಾಲಿಕವಾಗಿ ಈಗ ವಾಯುಭಾರ ಕುಸಿತದಿಂದ ಈ ಮಳೆ ಬೀಳುತ್ತಿದೆ. ಹಾಗೇನಾದರೂ ಮಳೆ ಜಾಸ್ತಿಯಾಗಿ ನೀರು ತುಂಬಲು ಕೇವಲ 5 ಅಡಿ ಅಂತರ ಮಾತ್ರ ಕಂಡುಬಂದರೆ ಬಳಿಕ ದ್ವಾರದಿಂದ ನೀರನ್ನು ಬಿಡಲಾಗುವುದು. ಮುಖ್ಯ ಇಂಜಿನಿಯರ್ ಅವರ ಗಮನಕ್ಕೆ ತಂದು ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.