ಭಾಗಮಂಡಲ, ಮೇ 19: ಗ್ರಾಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ಗ್ರಾಮ ಪಂಚಾಯಿತಿಗೆ ಇದೀಗ ಸ್ವಂತ ಕಟ್ಟಡವೇ ಇಲ್ಲದೆÀ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪರಿಸ್ಥಿತಿ ಚೆಟ್ಟಿ ಮಾನಿಯ ಕುಂದಚೇರಿ ಗ್ರಾಮ ಪಂಚಾಯಿತಿಯದ್ದು. 1981ರಲ್ಲಿ ಕುಂದಚೇರಿ ಗ್ರಾಮದ ಅಮ್ಮವ್ವನ ಮತ್ತು ಕೇಕಡ ಕುಟುಂಬಸ್ಥರ ಒಳ ಒಪ್ಪಂದದೊಂದಿಗೆ ಅಮ್ಮವ್ವನ ಕುಟುಂಬಕ್ಕೆ ಕೇಕಡ ಕುಟುಂಬಸ್ಥರು ಹತ್ತು ಸೆಂಟ್ ಜಾಗವನ್ನು ನೀಡಿ ಕುಂದಚೇರಿ ಮುಖ್ಯ ರಸ್ತೆಯ ಬಳಿ ಇರುವ ಅಮ್ಮವ್ವನ ಕುಟುಂಬಸ್ಥರ ಜಾಗವನ್ನು ಕೇಕಡ ಕುಟುಂಬಸ್ಥರು ಪಡೆದು ಗ್ರಾಮ ಪಂಚಾಯಿತಿಗೆ ಉದಾರವಾಗಿ ನೀಡಿದ್ದರು. ಆದರೆ ಕಾನೂನಾತ್ಮಕವಾಗಿ ಯಾವುದೇ ದಾಖಲೆ ಮಾಡಿಕೊಳ್ಳದೆ ಇತ್ತ ಗ್ರಾಮ ಪಂಚಾಯಿತಿಯ ಕಟ್ಟಡ ನಿರ್ಮಾಣಗೊಂಡಿತ್ತು. ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಐದು ವರ್ಷಗಳಿಂದ ವಿಪರೀತ ಮಳೆಯಿಂದಾಗಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಒಂದಷ್ಟು ಗ್ರಾಮ ಪಂಚಾಯಿತಿ ಹಣವನ್ನು ಕ್ರೋಢೀಕರಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ನಂತರದಲ್ಲಿ ಚುನಾವಣೆ ಬಂದು ನೂತನ ಆಡಳಿತ ಮಂಡಳಿ ರಚನೆಗೊಂಡಿತು. ಆಡಳಿತ ಮಂಡಳಿ ಮತ್ತೆ ಮೂರು ಅಂತಸ್ತಿನ ನೂತನ ಕಟ್ಟಡ ಮಾಡುವುದಾಗಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ ದಾಖಲೆಗಳ ಗೊಂದಲದಿಂದಾಗಿ ಗ್ರಾಮಸ್ಥರ ವಿಶೇಷ ಮಹಾಸಭೆಯನ್ನು ಕಳೆದ ನವೆಂಬರ್‍ನಲ್ಲಿ ನಡೆಸಿತ್ತ್ತು. ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಒಮ್ಮತದಿಂದ ಹಳೆಯ ಕಟ್ಟಡವನ್ನು ಕೆಡವಿ ನೂತನ ಕಟ್ಟಡವನ್ನು ನಿರ್ಮಿಸಲು ಯಾವುದೇ ಅಭ್ಯಂತರ ಇರುವುದಿಲ್ಲ. ಕಾಮಗಾರಿ ಮಾಡುತ್ತಲೇ ದಾಖಲಾತಿ ಸರಿಪಡಿಸಿಕೊಳ್ಳುತ್ತಾ ಹೋಗಿ ಎಂದು ಸಲಹೆ ನೀಡಿದ್ದರು.
ನಂತರದ ದಿನದಲ್ಲಿ ಹಳೆ ಕಟ್ಟಡ ಕೆಡವಿ ಶಾಸಕರ ಸಮ್ಮುಖದಲ್ಲಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಕೆಲಸ ಕಾರ್ಯ ಆರಂಭವಾಗಿ ಅಡಿಪಾಯದ ಕೆಲಸವೂ ಮುಕ್ತಾಯ ಹಂತಕ್ಕೆ ತಲುಪುತ್ತಿದ್ದಂತೆ ಅಮ್ಮವ್ವನ ಕುಟುಂಬಸ್ಥರ 50 ಸೆಂಟ್ ಜಾಗ ಇರುವುದರಿಂದ ಸರ್ವೆ ಕಾರ್ಯಕ್ಕೆ ಮುಂದಾಯಿತು. ಸರ್ವೆ ನಡೆಯುವ ಸಂದರ್ಭ 20 ಸೆಂಟ್ ಜಾಗ ರಸ್ತೆ ಪಾಲಾಗಿದ್ದು, 30 ಸೆಂಟ್ ಜಾಗ ಮಾತ್ರ ಅಮ್ಮವ್ವನ ಕುಟುಂಬಕ್ಕೆ ಸೇರಿದ್ದು ಗೊಂದಲದಿಂದಾಗಿ ಪಂಚಾಯಿತಿ ಕಟ್ಟಡ ಕಾಮಗಾರಿ ಕೆಲಸ ಸ್ಥಗಿತಗೊಂಡಿತು. ಈ ಬಗ್ಗೆ ಇತ್ತೀಚೆಗೆ ಮತ್ತೆ ಗ್ರಾಮಸ್ಥರ ವಿಶೇಷ ಗ್ರಾಮ ಸಭೆಯನ್ನು ಗ್ರಾಮ ಪಂಚಾಯಿತಿ ನಡೆಸಿತು. ಗ್ರಾಮಸಭೆಯಲ್ಲಿ ದಾಖಲಾತಿ ಮಾಡದೆ ಕಾಮಗಾರಿ ಆರಂಭಿಸಬೇಕು ಎಂದು ಈ ಹಿಂದಿನ ಗ್ರಾಮಸಭೆಯಲ್ಲಿ ಒಪ್ಪಿಗೆ ನೀಡಿದವರೇ ತಕರಾರು ತೆಗೆದರು. ಗ್ರಾಮಸಭೆಯಲ್ಲಿ ಎರಡೂ ಕುಟುಂಬಸ್ಥರು ಭಾಗಿಯಾಗಿದ್ದರು. ಅಮ್ಮವ್ವನ ಕುಟುಂಬಸ್ಥರ ಮನ ಒಲಿಸುವುದರೊಂದಿಗೆ 5 ಸೆಂಟ್ ಜಾಗ ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಕಾರ್ಯನಿರ್ವಹಿಸಬೇಕಾಗುತ್ತದೆ.
-ಸುನಿಲ್ ಕುಯ್ಯಮುಡಿ