ರೂ. 1,600 ಕೋಟಿ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಆಧುನೀಕರಣ: ಬೊಮ್ಮಾಯಿ

ಬೆಂಗಳೂರು, ಮೇ 19: ಬೆಂಗಳೂರಿನ ಬೃಹತ್ ಮಳೆ ನೀರು ಕಾಲುವೆಗಳನ್ನು ರೂ. 1600 ಕೋಟಿ ವೆಚ್ಚದಲ್ಲಿ ಆಧುನೀಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರಿನ ವಿವಿಧೆಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಗೃಹ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕಳೆದ ಬಾರಿ ಮಳೆಯಾದಾಗ ಎಲ್ಲಾ ಶಾಸಕರು ಹಾಗೂ ವಿರೋಧ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ ಹಲವು ತೀರ್ಮಾನಗಳನ್ನು ಮಾಡಿದ್ದೆವು. ಈ ಪೈಕಿ ಮಳೆ ನೀರು ಕಾಲುವೆಗಳನ್ನು ಅಭಿವೃದ್ಧಿ ಮಾಡುವುದು ಎಂದು ತೀರ್ಮಾನಿಸಲಾಗಿತ್ತು. ಇದಕ್ಕೆ ಡಿಪಿಆರ್ ಸಿದ್ಧವಾಗಿ ಬಜೆಟ್‍ನಲ್ಲಿ ಈಗಾಗಲೇ ಅನುಮೋದನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಡಿಪಿಆರ್ ಪೂರ್ಣಗೊಂಡ ಕೂಡಲೇ ಅನುಮೋದನೆ ನೀಡಿ ಕೆಲಸ ಪ್ರಾರಂಭಿಸಲಾಗುವುದು ಎಂದರು. ರೂ. 400 ಕೋಟಿಗಿಂತ ಹೆಚ್ಚು ವೆಚ್ಚದಲ್ಲಿ ಅಡಚಣೆಗಳಿರುವಲ್ಲಿ, ಹೂಳು ತುಂಬಿರುವಲ್ಲಿ, ಹಳೆ ಚರಂಡಿಗಳ ಕಟ್ಟಡಗಳನ್ನು ಕಟ್ಟಲು ಅನುಮತಿ ನೀಡಲಾಗಿದೆ. ತುರ್ತಾಗಿ ಹೂಳೆತ್ತುವ ಕೆಲಸ ಆಗಬೇಕಿದೆ. ಮುಖ್ಯ ಚರಂಡಿಯ ಹೂಳೆತ್ತುವ ಕಾರ್ಯವನ್ನು ಸಮಗ್ರವಾಗಿ ಮಾಡಬೇಕು. ಹೆಚ್.ಬಿ.ಆರ್. ಬಡಾವಣೆಯ ಚರಂಡಿಯ ಸುಮಾರು 2.50 ಕಿ.ಮೀ. ಹೂಳೆತ್ತಲು ಸೂಚಿಸಲಾಗಿದೆ. ಚರಂಡಿ ಪಕ್ಕದಲ್ಲಿರುವ ವಾರ್ಡ್‍ಗಳಲ್ಲಿ ದ್ವಿತೀಯ ಮತ್ತು ತೃತೀಯ ಚರಂಡಿಗಳನ್ನೂ ಕೂಡ ಹೂಳೆತ್ತಲು ಆದೇಶ ನೀಡಲಾಗಿದೆ. ಮುಖ್ಯ ಚರಂಡಿಗೆ ಸರ್ಕಾರ ಅನುದಾನವನ್ನು ಒದಗಿಸುತ್ತದೆ. ದ್ವಿತೀಯ ಮತ್ತು ತೃತೀಯ ಚರಂಡಿಗಳನ್ನು ಬಿಬಿಎಂಪಿ ಅನುದಾನದಲ್ಲಿ ಸ್ವಚ್ಛ ಮಾಡಲು ಸೂಚಿಸಲಾಗಿದೆ. ಎಸ್.ಟಿ.ಪಿ ಪ್ಲಾಂಟ್ ಸಾಮಥ್ರ್ಯವನ್ನು 40 ಎಂಎಲ್‍ಡಿಗೆ ಹೆಚ್ಚಿಸಲು ಸೂಚಿಸಲಾಗಿದೆ. ಬಿಬಿಎಂಪಿ ಈ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಎಸ್‍ಎಸ್‍ಎಲ್‍ಸಿ ಫಲಿತಾಂಶ: 145 ವಿದ್ಯಾರ್ಥಿಗಳಿಗೆ 625 ಅಂಕ

ಬೆಂಗಳೂರು, ಮೇ 19: ಕಳೆದ ಹತ್ತು ವರ್ಷಗಳಲ್ಲಿಯೇ ದಾಖಲೆಯ ಫಲಿತಾಂಶ ಈ ಬಾರಿಯ ಹತ್ತನೇ ತರಗತಿ ಫಲಿತಾಂಶದಲ್ಲಿ ಬಂದಿದೆ. 2021-22ನೇ ಶೈಕ್ಷಣಿಕ ಸಾಲಿನ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಶೇ. 90.29 ಬಾಲಕಿಯರು, ಶೇ. 81.03 ಬಾಲಕರು ತೇರ್ಗಡೆಗೊಂಡಿದ್ದಾರೆ. ಗ್ರೇಡ್ ಅಂಕ: ಈ ಬಾರಿ ಗ್ರೇಡ್ ಅಂಕಗಳನ್ನು ನೀಡಲಾಗಿದ್ದು, ಎ+ ಗ್ರೇಡ್ ನಲ್ಲಿ 1,18,875 ವಿದ್ಯಾರ್ಥಿಗಳು, ಎ ಗ್ರೇಡ್‍ನಲ್ಲಿ 1,82,60, ಬಿ+ನಲ್ಲಿ 1,73,528, ಬಿ ಗ್ರೇಡ್‍ನಲ್ಲಿ 1,43,900 ಮಕ್ಕಳು ತೇರ್ಗಡೆ ಹೊಂದಿದ್ದಾರೆ. ಸಿ+ನಲ್ಲಿ 87,801, ಸಿ ಗ್ರೇಡ್‍ನಲ್ಲಿ 14,627 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 91 ರಿಂದ 100 ಅಂಕ ಪಡೆದವರಿಗೆ ಎ+, 81 ರಿಂದ 90 ಅಂಕ ಗಳಿಸಿದವರಿಗೆ ಎ ಗ್ರೇಡ್, 71 ರಿಂದ 80 ಅಂಕ ಗಳಿಸಿದ್ದರೆ ಬಿ+, 61ರಿಂದ 60 ಅಂಕ ಗಳಿಸಿದವರಿಗೆ ಬಿ ಗ್ರೇಡ್, 51 ರಿಂದ 60 ಅಂಕ ಗಳಿಸಿದವರಿಗೆ ಸಿ+ ಹಾಗೂ 35 ರಿಂದ 50 ಅಂಕ ಗಳಿಸಿದವರಿಗೆ ಸಿ ಗ್ರೇಡ್ ನೀಡಲಾಗುತ್ತದೆ. ರಾಜ್ಯದ 1462 ಸರ್ಕಾರಿ ಶಾಲೆಗಳಲ್ಲಿ ಎಲ್ಲ ಮಕ್ಕಳೂ ತೇರ್ಗಡೆಯಾಗಿದ್ದಾರೆ. 467 ಅನುದಾನ ಶಾಲೆಗಳು, 1991 ಅನುದಾನ ರಹಿತ ಶಾಲೆಗಳಲ್ಲಿ ನೂರಕ್ಕೆ ನೂರು ಫಲಿತಾಂಶ, ಎರಡು ಸರ್ಕಾರಿ ಶಾಲೆಗಳು, ಮೂರು ಅನುದಾನಿತ ಮತ್ತು 15 ಅನುದಾನರಹಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. 145 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್: 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 309 ವಿದ್ಯಾರ್ಥಿಗಳಿಗೆ 624, 472 ವಿದ್ಯಾರ್ಥಿಗಳು 623 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ರಾಜ್ಯದ 3,920 ಶಾಲೆಗಳಿಗೆ ಶೇ. 100 ರಷ್ಟು ಫಲಿತಾಂಶ ಬಂದಿದೆ. ಸರ್ಕಾರಿ ಶಾಲೆಗೆ ಶೇ. 88, ಅನುದಾನಿತ ಶಾಲೆಯಲ್ಲಿ ಶೇ. 87.84, ಅನುದಾನ ರಹಿತ ಶಾಲೆಗಳಲ್ಲಿ ಶೇ. 92.29ರಷ್ಟು ಫಲಿತಾಂಶ ಬಂದಿದೆ.

ದೆಹಲಿಯಲ್ಲಿ ಅಗ್ನಿ ಅವಘಡ: ಓರ್ವ ಸಜೀವ ದಹನ

ನವದೆಹಲಿ, ಮೇ 19: 27 ಮಂದಿಯನ್ನು ಬಲಿ ಪಡೆದ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ಮಾಸುವ ಮುನ್ನವೇ ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಸಜೀವ ದಹನವಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಇಂದು ಈಶಾನ್ಯ ದೆಹಲಿಯ ನ್ಯೂ ಮುಸ್ತಫಾಬಾದ್ ಪ್ರದೇಶದ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, 6 ಮಂದಿಗೆ ಸುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ. ದೆಹಲಿ ಅಗ್ನಿಶಾಮಕ ಸೇವೆ ಪ್ರಕಾರ, ನ್ಯೂ ಮುಸ್ತಫಾಬಾದ್ ಪ್ರದೇಶದಲ್ಲಿ ಇಂದು ಮಧ್ಯಾಹ್ನ 12.20ರ ಸುಮಾರಿಗೆ ಅಗ್ನಿ ಅನಾಹುತದ ಬಗ್ಗೆ ಕರೆ ಬಂದಿದೆ. ಕರೆಗೆ ಸ್ಪಂದಿಸಿದ 6 ಅಗ್ನಿಶಾಮಕ ದಳಗಳು ಬೆಂಕಿ ನಂದಿಸಲು ಸ್ಥಳಕ್ಕೆ ಧಾವಿಸಿದವು. ನೆಲಮಾಳಿಗೆ ಮತ್ತು ಮೊದಲ ಮಹಡಿಯನ್ನು ಒಳಗೊಂಡಿರುವ ಕಟ್ಟಡದೊಳಗೆ ಏಳು ಜನರು ಸಿಲುಕಿಕೊಂಡಿದ್ದನ್ನು ಅಗ್ನಿಶಾಮಕ ಸಿಬ್ಬಂದಿ ಪತ್ತೆ ಮಾಡಿದೆ. ತಕ್ಷಣವೇ, ಅವರನ್ನು ರಕ್ಷಿಸಲಾಯಿತು. ಆದರೆ ಗಾಯಗೊಂಡವರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ ಹಾಗೂ ಗಾಯಾಳುಗಳ ಪೈಕಿ ಮಹಿಳೆಯೋರ್ವಳ ಸ್ಥಿತಿ ಗಂಭೀರವಾಗಿದೆ ಎಂದು ಡಿಎಫ್‍ಎಸ್ ತಿಳಿಸಿದೆ. ಕೂಲರ್‍ನ ಕವಚಗಳನ್ನು ತಯಾರಿಸುವ ಕಾರ್ಖಾನೆ ಯಲ್ಲಿ ಈ ಅಗ್ನಿ ದುರಂತ ಸಂಭವಿಸಿದೆ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ. ಕಳೆದ ವಾರ, ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿಯ ಕಟ್ಟಡದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತು, ಇದರಲ್ಲಿ 27 ಜನರು ಸಾವನ್ನಪ್ಪಿ, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಘಟನೆಯ ನಂತರ ಕಟ್ಟಡದ ಮಾಲೀಕ ಸೇರಿದಂತೆ ಮೂವರನ್ನು ಬಂದಿಸಲಾಗಿದೆ.

34 ವರ್ಷಗಳ ನಂತರ ಒಂದು ವರ್ಷ ಜೈಲು ಶಿಕ್ಷೆ

ಚಂಡೀಗಢ, ಮೇ 19: 1988 ರ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 34 ವರ್ಷಗಳ ನಂತರ ಮಾಜಿ ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು, ಘನ ನ್ಯಾಯಾಲಯದ ತೀರ್ಪಿಗೆ ತಲೆ ಬಾಗುವುದಾಗಿ ತಿಳಿಸಿದ್ದಾರೆ. ಇಂದು ಪಟಿಯಾಲದಲ್ಲಿ ಹಣದುಬ್ಬರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಿಧು, ಘನ ನ್ಯಾಯಾಲಯದ ತೀರ್ಪಿಗೆ ತಲೆ ಬಾಗುವುದಾಗಿ ಟ್ವೀಟ್ ಮಾಡಿದ್ದಾರೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಎಸ್.ಕೆ. ಕೌಲ್ ಅವರ ಪೀಠ, ರಸ್ತೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸಿಧು ಅವರನ್ನು ಆರೋಪಮುಕ್ತಗೊಳಿಸಿದ್ದ ಮೇ 2018ರ ಆದೇಶವನ್ನು ಮರುಪರಿಶೀಲಿಸಿ ಇಂದು 1 ವರ್ಷದ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕೊರೊನಾ ನಡುವೆ ಎದುರಾಗಿದೆ ಮಂಕಿಪಾಕ್ಸ್ ಭೀತಿ

ಮಾಂಟ್ರಿಯಲ್, ಮೇ 19: ಯುನೈಟೆಡ್ ಸ್ಟೇಟ್ಸ್‍ನ ಮ್ಯಾಸಚೂಸೆಟ್ಸ್‍ನಲ್ಲಿ ಮಂಕಿಪಾಕ್ಸ್‍ನ ಅಪರೂಪದ ಪ್ರಕರಣ ವರದಿಯಾಗಿದ್ದು, ಇದು ಈ ವರ್ಷ ದೇಶದಲ್ಲಿ ವರದಿಯಾದ ಮೊದಲ ಪ್ರಕರಣವಾಗಿದೆ. ಮಂಕಿಪಾಕ್ಸ್ ವೈರಸ್ ಸೋಂಕಿತ ವ್ಯಕ್ತಿ ಇತ್ತೀಚೆಗೆ ಕೆನಡಾಕ್ಕೆ ಪ್ರಯಾಣ ಬೆಳೆಸಿದ್ದರು. ಸ್ಪೇನ್ ಮತ್ತು ಪೆÇೀರ್ಚುಗಲ್ 40ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಹೊಸದಾಗಿ ಕೆನಡಾ ದೇಶದಲ್ಲಿ ಒಂದು ಡಜನ್‍ಗಿಂತಲೂ ಹೆಚ್ಚು ಮಂಕಿಪಾಕ್ಸ್‍ನ ಶಂಕಿತ ಪ್ರಕರಣಗಳನ್ನು ಪತ್ತೆಹಚ್ಚಲಾಗುತ್ತಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೆಚ್ಚಿನ ಮಂಕಿಪಾಕ್ಸ್ ಪ್ರಕರಣಗಳ ಉಂಟಾಗುವ ಸಾಧ್ಯತೆ ಇದೆ ಎಂದು ಊಹಿಸಿದೆ. ಮಂಕಿಪಾಕ್ಸ್‍ನಿಂದ ನಾಗರಿಕರಿಗೆ ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದು, ಈಗಾಗಲೇ ರೋಗಿಗಳೊಂದಿಗೆ ಸಂಪರ್ಕದಲ್ಲಿದ್ದ ಜನರನ್ನು ಪತ್ತೆಹಚ್ಚಲಾಗುತ್ತಿದೆ. ಮಂಕಿಪಾಕ್ಸ್ ವೈರಸ್ ಆರ್ಥೋಪಾಕ್ಸ್ ವೈರಸ್ ಕುಟುಂಬಕ್ಕೆ ಸೇರಿದೆ, ಇದರಲ್ಲಿ ಸಿಡುಬು ರೋಗಕ್ಕೆ ಕಾರಣವಾಗುವ ವೆರಿಯೊಲಾ ವೈರಸ್ ಮತ್ತು ಸಿಡುಬು ಲಸಿಕೆಯಲ್ಲಿ ಬಳಸಲಾದ ವ್ಯಾಕ್ಸಿನಿಯಾ ವೈರಸ್ ಸೇರಿವೆ. ವ್ಯಾಕ್ಸಿನೇಷನ್‍ನಿಂದಾಗಿ 1980ರಲ್ಲಿ ಪ್ರಪಂಚದಾದ್ಯಂತ ಸಿಡುಬು ನಿರ್ಮೂಲನೆಯಾಯಿತು, ಮಂಕಿಪಾಕ್ಸ್ ಇನ್ನೂ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಹಲವಾರು ರಾಷ್ಟ್ರಗಳಲ್ಲಿ ಮತ್ತು ಇತರೆಡೆಗಳಲ್ಲಿ ಅಸ್ತಿತ್ವದಲ್ಲಿದೆ. ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು ಅದು ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ, ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ಫ್ಲೂ ತರಹದ ಲಕ್ಷಣಗಳನ್ನು ಒಳಗೊಂಡಿರುತ್ತದೆ.