ಮುಳ್ಳೂರು, ಮೇ ೧೮: ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಯ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ ಆಚರಣಾ ಮಹೋತ್ಸವ ಯುವ ಸಮಿತಿ ವತಿಯಿಂದ ಶನಿವಾರಸಂತೆ ಯಲ್ಲಿ ಬಸವೇಶ್ವರ ಅವರ ೮೮೯ನೇ ಜಯಂತಿ ಮಹೋತ್ಸ ವದ ಅಂಗವಾಗಿ ಭವ್ಯ ಪಂಜಿನ ಮೆರವಣಿಗೆ ನಡೆಯಿತು. ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಬನ್ನಿ ಮಂಟಪದಲ್ಲಿ ಪೂಜೆ ಸಲ್ಲಿಸಿ, ಪಂಜಿನ ಮೆರವಣಿಗೆಗೆ ಚಾಲನೆ ನೀಡಲಾಯಿತು. ತೆರೆದ ವಾಹನದಲ್ಲಿ ಶ್ರೀ ಬಸವೇಶ್ವರ ಭಾವಚಿತ್ರವನ್ನು ಅಳವಡಿಸಿ ಸಾಗಲಾಯಿತು. ಈ ಸಂದರ್ಭ ನಂದಿಧ್ವಜ, ವೀರಗಾಸೆ, ಕಳಸಕನ್ನಡಿ, ಧರ್ಮಧ್ವಜ, ಡೊಳ್ಳುಕುಣಿತ, ಮಕ್ಕಳಿಂದ ಶರಣರ ಸ್ತಬ್ಧಚಿತ್ರ ಪ್ರದರ್ಶನಗಳೊಂದಿಗೆ ಪಂಜಿನ ಮೆರವಣಿಗೆ ನಡೆಸಲಾಯಿತು. ಪಂಜಿನ ಮೆರವಣಿಗೆ ಶನಿವಾರಸಂತೆ ಮುಖ್ಯ ರಸ್ತೆ ಮೂಲಕ ತೆರಳಿ ಗುಡುಗಳಲೆ ಜಾತ್ರೆ ಮೈದಾನದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಉತ್ಸವ ಮೆರವಣಿಗೆ ಕೊನೆಗೊಂಡಿತು. ತಪೋಕ್ಷೇತ್ರ ಮನೆಹಳ್ಳಿ ಮಠಾಧೀಶ ಗುರುಸಿದ್ಧವೀರೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಉತ್ಸವ ಮೆರವಣಿಗೆ ನಡೆಯಿತು.
ಬಸವೇಶ್ವರ ಜಯಂತಿ ಮಹೋತ್ಸವದಲ್ಲಿ ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಲುಮಠದ ಮಹಾಂತಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಇಮ್ಮಡಿ ಶಿವಲಿಂಗ ಸ್ವಾಮೀಜಿ, ಜಯದೇವ ಸ್ವಾಮೀಜಿ ಉಪಸ್ಥಿತರಿದ್ದರು. ಅರಕಲಗೂಡಿನ ದೇವಾನಂದ ವರಪ್ರಸಾದ ಮತ್ತು ಮಕ್ಕಳ ತಂಡದವರಿAದ ವಿಶೇಷವಾದ ಬಸವಾದಿ ಶರಣರ ಬಗ್ಗೆ ಕಿರುರಂಗಚಿತ್ರ ಪ್ರದರ್ಶನ ನಡೆಯಿತು. ಸಂಘಟಕ ಪ್ರಮುಖರಾದ ವಿಕ್ಕಿ, ರೋಹಿತ್, ಭರತ್, ಅಕ್ಷಯ್, ಸಂತೋಷ್, ಚೇತನ್, ಸಂದೀಪ್, ಪ್ರವೀಣ್, ನಂದನ್, ದಿಲೀಪ್ ಮುಂತಾದವರಿದ್ದರು.