ಕಣಿವೆ, ಮೇ ೧೮: ಹಳ್ಳಿಗಾಡಿನ ಜನಸಾಮಾನ್ಯರಿಗೆ, ಬಡವರು ಹಾಗೂ ಕಾರ್ಮಿಕರಿಗೆ ಕುಡಿಯುವ ಶುದ್ಧ ನೀರನ್ನು ಮನೆ ಮನೆಗಳಿಗೆ ಪೂರೈಸುವ ಜಲಜೀವನ್ ಯೋಜನೆಯ ಕಾಮಗಾರಿ ಅತ್ಯಂತ ಕಳಪೆಯಿಂದ ಕೂಡಿದೆ ಎಂದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಟ್ಟಡ್ಕ ವಿಶ್ವ ಆಪಾದನೆ ಮಾಡಿದರು.
ನಂಜರಾಯಪಟ್ಟಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರಿನ ಯೋಜನೆ ಬಗ್ಗೆ ಮಾಹಿತಿ ನೀಡುತ್ತಿದ್ದ ಜಿಲ್ಲಾ ಪಂಚಾಯಿತಿ ಇಂಜಿನಿಯ ರಿಂಗ್ ವಿಭಾಗದ ಅಭಿಯಂತರ ಫಯಾಜ್ ಅಹಮದ್ ಅವರನ್ನು ತರಾಟೆ ತೆಗೆದುಕೊಂಡ ಸಭಾಧ್ಯಕ್ಷ ವಿಶ್ವ, ಜಲಜೀವನ್ ಯೋಜನೆಯಡಿ ನೀರಿನ ಸಂಪರ್ಕ ಕಲ್ಪಿಸಲು ಬಳಸುತ್ತಿರುವ ಪೈಪ್‌ಗಳು ಹಾಗೂ ಸಾಮಗ್ರಿಗಳು ಕಳಪೆಯಿಂದ ಕೂಡಿವೆ. ಸ್ವತಃ ನನ್ನ ಮನೆಗೆ ಅಳವಡಿಸಿರುವ ಸಂಪರ್ಕದಲ್ಲಿ ಗುಣಮಟ್ಟದ ಪೈಪ್ ಅಳವಡಿಸಿಲ್ಲ. ಜೊತೆಗೆ ಇತ್ತ ಸಂಪರ್ಕ ಕೊಟ್ಟು ಕೆಲ ಸಮಯದಲ್ಲಿ ನೀರು ಸೋರುತ್ತಿದೆ ಎಂದು ದೂರಿದರು.
ಈ ಬಗ್ಗೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರನ್ನು ಸಂಪರ್ಕಿಸಲು ಯತ್ನಿಸಿದರೆ ನಮ್ಮ ಫೋನ್ ಕರೆಯನ್ನು ಅವರು ಸ್ವೀಕರಿಸುತ್ತಿಲ್ಲ ಎಂದು ಅಧ್ಯಕ್ಷ ವಿಶ್ವ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭ ಮಾತನಾಡಿದ ಪಂಚಾಯಿತಿ ಸದಸ್ಯ ಮಾವಾಜಿ ರಕ್ಷಿತ್, ಕುಡಿಯುವ ನೀರಿನ ಯೋಜನೆ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ. ಈ ಬಗ್ಗೆ ಸಂಬAಧಪಟ್ಟ ವಾರ್ಡ್ಗಳಲ್ಲಿ ಚುನಾಯಿತರಾಗಿರುವ ನಮ್ಮ ಕರ್ತವ್ಯಗಳ ಬಗ್ಗೆ ಪಂಚಾಯಿತಿ ವ್ಯಾಪ್ತಿಯ ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಖಾರವಾಗಿ ನುಡಿದರು. ನಂತರ ಈ ಬಗ್ಗೆ ಗುತ್ತಿಗೆದಾರ ಸಂಸ್ಥೆಯವರು ಹಾಗೂ ಅಧಿಕಾರಿಗಳೊಂದಿಗೆ ಪಂಚಾಯಿತಿಯಲ್ಲಿ ಸಭೆ ನಡೆಸಿದ ಬಳಿಕವಷ್ಟೆ ಕುಡಿಯುವ ನೀರಿನ ಯೋಜನಾ ಕಾಮಗಾರಿ ಪೂರ್ಣಗೊಳಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು.
ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ಅರಣ್ಯ ಇಲಾಖೆ ಯೋಜನೆಗಳಡಿ ಮಾತನಾಡಲು ನಿಂತಾಗ, ಸಭಾಧ್ಯಕ್ಷ ವಿಶ್ವ, ನಂಜರಾಯಪಟ್ಟಣ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ.
ಕಾಡಾನೆಗಳ ಹಾವಳಿ ತಡೆಗೆ ಇಲಾಖೆ ಹಮ್ಮಿಕೊಂಡಿರುವ ರೈಲ್ವೆ ಕಂಬಿ ಬ್ಯಾರಿಕೇಡ್ ಕಾಮಗಾರಿ ಅವೈಜ್ಞಾನಿಕವಾಗಿದೆ.
ಇಲ್ಲಿ ಕಾಡಾನೆಗಳನ್ನು ನಿಗ್ರಹಿಸಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಯಾದ ಬಳಿಕ ಕಾಡಾನೆಗಳ ಹಾವಳಿ ಹೆಚ್ಚಳವಾಗಿದೆ. ಈ ಮೊದಲು ಕಾಡಿನಿಂದ ತೋಟಕ್ಕೆ ಧಾವಿಸುತ್ತಿದ್ದ ಕಾಡಾನೆಗಳು ಬೆಳೆ ತಿಂದು ಕಾಡಿಗೆ ಸುರಕ್ಷಿತವಾಗಿ ಮರಳುತ್ತಿದ್ದವು. ಆದರೆ ಅವೈಜ್ಞಾನಿಕ ರೈಲ್ವೆ ಬ್ಯಾರಿಕೇಡ್ ಒಳಗೆ ಸಿಲುಕಿ ಕೆಲವೆಡೆ ಆನೆಗಳು ಒದ್ದಾಡುವುದು ಒಂದೆಡೆಯಾದರೆ, ಮತ್ತೆ ಕೆಲವೆಡೆ ಬ್ಯಾರಿಕೇಡ್ ಒಳಗೆಯೇ ಕಾಡಾನೆಗಳು ಸಲೀಸಾಗಿ ನುಸುಳಿ ತೆರಳುತ್ತಿವೆ. ಜೊತೆಗೆ ಗ್ರಾಮದೊಳಕ್ಕೂ ಧಾವಿಸುತ್ತಿವೆ. ಸರಕಾರದ ಕೋಟ್ಯಾಂತರ ರೂಪಾಯಿಗಳ ಇಂತಹ ಕಾಮಗಾರಿಗಳು ಯಾರಿಗೆ ಉಪಯೋಗ ಎಂದು ಅಧ್ಯಕ್ಷ ವಿಶ್ವ ಅಧಿಕಾರಿಗಳ ವಿರುದ್ಧ ಗರಂ ಆದರು.
ಹಾಗೆಯೇ ಪ್ರಮುಖ ಪ್ರವಾಸಿ ತಾಣ ದುಬಾರೆಯಲ್ಲಿ ಸಾಕಾನೆ ಶಿಬಿರಕ್ಕೆ ಧಾವಿಸುವ ಪ್ರವಾಸಿಗರಿಗೆ ಸರಿಯಾದ ಬೋಟಿಂಗ್ ವ್ಯವಸ್ಥೆ ಇಲ್ಲದೇ ಪ್ರವಾಸಿಗರು ನದಿಯೊಳಗಿನ ಕಲ್ಲು ದಾರಿಯಲ್ಲೇ ಸಾಗುತ್ತಾ ಅವಘಡಗಳಿಗೆ ಸಿಲುಕುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವರು ಯಾಂತ್ರಿಕ ದೋಣಿ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಪಂಚಾಯಿತಿ ವತಿಯಿಂದಲೇ ಬೋಟ್ ಅಳವಡಿಸಿ ಪ್ರವಾಸಿಗರಿಗೆ ಅನುಕೂಲ ಒದಗಿಸುವುದಾಗಿ ವಿಶ್ವ ಹೇಳಿದರು.
ಹಾಗೆಯೇ ಕೃಷಿ ಇಲಾಖೆ ವತಿಯಿಂದ ರೈತರಿಗೆ ವಿತರಿಸುವ ಟಾರ್ಪಲ್ ಮತ್ತಿತರ ಸವಲತ್ತುಗಳನ್ನು ನೀಡುವಾಗ ಸ್ಥಳೀಯ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದು ಅವರಿಂದ ಫಲಾನುಭವಿಗಳ ಪಟ್ಟಿ ಪಡೆದು ವಿತರಿಸುವ ವ್ಯವಸ್ಥೆ ಆಗಬೇಕಿದೆ ಎಂದರು.
ಇದೇ ಸಂದರ್ಭ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ಪಂಚಾಯಿತಿ ಉಪಾಧ್ಯಕ್ಷೆ ಸಮೀರ, ಸದಸ್ಯರಾದ ಗಿರಿಜಮ್ಮ, ಕುಸುಮ, ಜಾಜಿ, ಪಿಡಿಒ ಬಿ.ಎಂ. ಕಲ್ಪ, ಕಾರ್ಯದರ್ಶಿ ಶೇಷಗಿರಿ ಇದ್ದರು.