ಕೂಡಿಗೆ, ಮೇ ೧೮: ಹುದುಗೂರು ಗ್ರಾಮದ ಜನಜಾಗೃತಿ ರೈತ ಸಂಘದ ವತಿಯಿಂದ ಹಾರಂಗಿ ಅಣೆಕಟ್ಟೆಯಿಂದ ಮುಖ್ಯನಾಲೆಯ ಎರಡೂ ಕಡೆಗಳು ಹಾಳಾಗಿರುವುದು ಮತ್ತು ಮುಖ್ಯನಾಲೆಯ ಒಂದು ಬದಿ ಶಿಥಿಲವಾಗಿರುವುದನ್ನು ಸರಿಪಡಿಸುವಂತೆ ಒತ್ತಾಯಿಸಿ ಹಾರಂಗಿಗೆ ಆಗಮಿಸಿದ ನಿಗಮದ ಪ್ರಧಾನ ವ್ಯವಸ್ಥಾಪಕ ಜಯಪ್ರಕಾಶ್ ಅವರಿಗೆ ಮನವಿಯನ್ನು ಸಲ್ಲಿಸಿತು. ಇದರ ಜೊತೆಯಲ್ಲಿ ಹುದುಗೂರು ಮತ್ತು ಕಾಳಿದೇವನ ಹೊಸೂರು ಗ್ರಾಮದ ಹತ್ತಿರದಲ್ಲಿ ಮುಖ್ಯನಾಲೆಯ ನಿರ್ಮಾಣ ಮಾಡಿದ್ದು, ಕಿರಿದಾದ ಮೇಲು ಸೇತುವೆಯಿಂದ ನಾಲೆಯ ನೀರಿನ ಹರಿಯುವಿಕೆ ನಿಧಾನವಾಗಿ ಹರಿಯುತ್ತಿದೆ.
ಕುಶಾಲನಗರದಲ್ಲಿರುವ ಹಾರಂಗಿ ಅಭಿಯಂತರ ಮುಖ್ಯ ಕಚೇರಿ ಸಹಾಯಕ ಅಭಿಯಂತರರ ಕಚೇರಿಯನ್ನು ಹಾರಂಗಿಯ ಹಳೆಯ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕೆಂದು ಸೇರಿದಂತೆ ಇನ್ನಿತರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದರು. ಈ ಸಂದರ್ಭ ಜನ ಜಾಗೃತಿ ರೈತ ಸಂಘದ ಅಧ್ಯಕ್ಷ ಟಿ.ಎಂ. ಚಿಣ್ಣಪ್ಪ, ಕಾರ್ಯದರ್ಶಿ ರವಿ, ನೀರು ಬಳಕೆದಾರರ ಸಂಘದ ಮಾಜಿ ಅಧ್ಯಕ್ಷ ಐ.ಎಸ್. ಗಣೇಶ್, ಪ್ರಕಾಶ್ ನಾಣಯ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.