ಸೋಮವಾರಪೇಟೆ, ಮೇ ೧೮: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಬೆಂಗಳೂರಿನ ಮಲ್ಟಿಫ್ಲೆಕ್ಸ್ ಸಮೂಹ ಸಂಸ್ಥೆಗಳು, ಶನಿವಾರಸಂತೆ ಗಣಪತಿ ಫೆಸ್ಟ್ ಆಂಡ್ ಫರ್ಟಿಲೈಸರ್ ಇವರ ಆಶ್ರಯದಲ್ಲಿ ಕಾಳುಮೆಣಸು ಬೆಳೆಯ ಕುರಿತ ವಿಚಾರ ಸಂಕಿರಣ ಮಹಿಳಾ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪ್ರಗತಿಪರ ರೈತ ಹಾಗೂ ವಿಎಸ್‌ಎಸ್‌ಎನ್ ನಿರ್ದೇಶಕ ಅರೆಯೂರು ಜಯಣ್ಣ ಉದ್ಘಾಟಿಸಿದರು. ಮಲ್ಟಿಫ್ಲ್ಲೆಕ್ಸ್ ಸಂಸ್ಥೆಯ ಕೃಷಿ ತಜ್ಞ ಡಾ. ನಾರಾಯಣ ಸ್ವಾಮಿ ಮಾಹಿತಿ ನೀಡಿ, ರೈತರು ವೈಜ್ಞಾನಿಕ ಕೃಷಿಯತ್ತ ಮರಳಿದರೆ ಮಾತ್ರ ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಅಧಿಕ ಇಳುವರಿ ಪಡೆದು, ಆದಾಯವನ್ನು ಗಳಿಸಬಹುದು ಎಂದರು.

ಮಧ್ಯಮ ಹಾಗೂ ಲಘು ಪೋಷಕಾಂಶ ಕೊರತೆ ಮಣ್ಣಿನಲ್ಲಿ ಆಗದಂತೆ ಎಚ್ಚರ ವಹಿಸಬೇಕು. ಲಘು ಪೋಷಕಾಂಶಗಳು ಮಣ್ಣಿನ ಗುಣಧರ್ಮವನ್ನು ವೃದ್ಧಿಸುವದರ ಜೊತೆಗೆ ಮಣ್ಣಿನ ರಸಸಾರತೆಯನ್ನು ಸಮತೋಲನದಲ್ಲಿಡುತ್ತದೆ. ಸೂಕ್ಷಾö್ಮಣು ಜೀವಿಗಳನ್ನೊಳಗೊಂಡ ಜೈವಿಕ ಸಾವಯವ ಗೊಬ್ಬರ ಬಳಕೆ ಮಾಡಿದರೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಕೃಷಿಕರಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎಂ. ಈಶ್ವರ್, ನಿರ್ದೇಶಕರಾದ ಬಿ.ಡಿ. ಮಂಜುನಾಥ್, ಬಿ.ಎಂ. ಸುರೇಶ್, ಪಿ.ಡಿ. ಮೋಹನ್‌ದಾಸ್, ರೂಪ ಸತೀಶ್, ಚಂದ್ರಿಕಾ ಕುಮಾರ್, ಸಿಇಓ ಹೆಚ್.ಪಿ. ರವೀಂದ್ರ, ಸಂಸ್ಥೆಯ ಸಿಬ್ಬಂದಿಗಳಾದ ಎಸ್.ಎ. ಆದಿತ್ಯ, ಎಸ್.ಆರ್. ಸಂತೋಷ್ ಇದ್ದರು.