ಗೋಣಿಕೊಪ್ಪಲು, ಮೇ ೧೮: ಕೊಡಗಿನ ಗಡಿ ಭಾಗವಾದ ಕುಟ್ಟದಲ್ಲಿ ಮುಗ್ಧ ಗಿರಿಜನರನ್ನು ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಆರೋಪದಡಿ ಇಬ್ಬರ ಮೇಲೆ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಭಾಗದ ಗಿರಿಜನರನ್ನು ಗುರಿಯಾಗಿರಿಸಿಕೊಂಡು ಅವರಿಗೆ ಕೆಲವು ಆಮಿಷಗಳನ್ನು ಒಡ್ಡುವ ಮೂಲಕ ಕೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಸಾಕ್ಷಿ ಸಹಿತ ಕಂಡು ಹಿಡಿಯಲು ಅಲ್ಲಿನ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲವು ದಿನಗಳಿಂದ ಎದುರು ನೋಡುತ್ತಿದ್ದರು.
ಮಂಗಳವಾರ ಸಂಜೆ ವೇಳೆ ಕೇರಳ ರಾಜ್ಯದ ಮಾನಂದವಾಡಿ ಭಾಗದಿಂದ ಆಗಮಿಸಿದರನ್ನೆಲ್ಲಾ ರಾಗಿರುವ ಕುರಿಯಚ್ಚನ್ ಹಾಗೂ ಸೆಲ್ವಿಯಮ್ಮ ಎಂಬಿಬ್ಬರು ಕುಟ್ಟ ಪಟ್ಟಣಕ್ಕೆ ಆಗಮಿಸಿ ಅಲ್ಲಿದ್ದ ಗಿರಿಜನ ಕುಟುಂಬಕ್ಕೆ ಸೇರಿರುವ ಪಣಿಯರವರ ಮುತ್ತು ಹಾಗೂ ಅವರ ಕುಟುಂಬದವರನ್ನು ಮನವೊಲಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಕುಟ್ಟ ಭಾಗದ ಹಿಂದೂ ಸಂಘಟನೆಯ ಪ್ರಮುಖರಾದ ಹರೀಶ್, ಸುಜನ್, ಕಾಳಪ್ಪ , ನಿತಿನ್, ಗೌತಮ್, ಜಿಷ್ಣು ಹಾಗೂ ಇತರರು ಇವರನ್ನು ವಿಚಾರಿಸಿದ ಸಂದರ್ಭ ಮತಾಂತರ ಮಾಡುವ ಸಲುವಾಗಿ ಬಂದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಎಚ್ಚೆತ್ತ ಹಿಂದೂ ಸಂಘಟನೆಯ ಕಾರ್ಯಕರ್ತರು ತಡ ಮಾಡದೇ ಕೂಡಲೇ ಅವರಿಬ್ಬರನ್ನು ಕುಟ್ಟ ಪೊಲೀಸರಿಗೆ ಒಪ್ಪಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಕುಟ್ಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊನ್ನಂಪೇಟೆ ಪ್ರಖಂಡದ ಮಾತೃ ಶಕ್ತಿ ತೀರ್ಥ ಮಂಜುನಾಥ್, ಸಂಚಾಲಕರಾದ ಸಜನ್ ಗಣಪತಿ, ನವೀನ್, ಮಹೇಶ್, ವಿಶು, ಸಂತೋಷ್, ತೀತೀರ ರಾಜ ಮಂಜುನಾಥ್ ಹಾಗೂ ಕುಟ್ಟ ಗ್ರಾಮಸ್ಥರು ಈ ವೇಳೆ ಹಾಜರಿದ್ದರು.